ಸಿದ್ದಾಪುರ: ಕಳೆದ 11 ವರ್ಷಗಳಿಂದ ಅನಾಥಾಶ್ರಮ ನಡೆಸುತ್ತಿರುವ ನಾಗರಾಜ ನಾಯ್ಕ ದಂಪತಿಗಳ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ತಿಂಗಳು ಕಳೆದಿದೆ. ದೂರು ನೀಡಿದರೂ ದುಷ್ಕರ್ಮಿಗಳ ಹೆಡೆಮುರಿ ಕಟ್ಟುವ ಕೆಲಸ ನಡೆದಿಲ್ಲ. ಈ ಹಿನ್ನಲೆ ಈ ಪ್ರಕರಣವನ್ನು ಸಿಬಿಐ ತನಿಖೆಗೆವಹಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.
ಸೆ 29ರಂದು ಸಿದ್ದಾಪುರ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ನಾಗರಾಜ ನಾಯ್ಕ ಅವರ ಮೇಲೆ ದಾಳಿ ನಡೆಯಿತು. ಅವರ ಪತ್ನಿ ಮಮತಾ ನಾಯ್ಕ 9 ತಿಂಗಳ ಗರ್ಭಿಣಿಯಾಗಿದ್ದು, ಅದನ್ನು ಲೆಕ್ಕಿಸದೇ ಮಹಿಳೆ ಮೇಲೆ ಕಿಡಿಗೇಡಿಗಳು ದಾಳಿ ನಡೆಸಿದ್ದರು. ಆಶ್ರಮಕ್ಕೂ ನುಗ್ಗಿ ಅಲ್ಲಿದ್ದ 2 ವರ್ಷದ ಮಗುವಿನ ಮೇಲೆಯೂ ಹಲ್ಲೆ ನಡೆಸಿದರು. `ಆಸ್ಪತ್ರೆ ಆವರಣದಲ್ಲಿ ಜೂಜಾಟ ನಡೆಸುವವರೇ ನಮ್ಮ ಮೇಲೆ ದಾಳಿ ನಡೆಸಿದ್ದಾರೆ’ ಎಂದು ನಾಗರಾಜ ನಾಯ್ಕ ದಂಪತಿ ದೂರಿದ್ದಾರೆ. ಆಶ್ರಮದ ಮೇಲೆಯೂ ದುಷ್ಕರ್ಮಿಗಳು ದಾಳಿ ನಡೆಸಿದ ಬಗ್ಗೆ ಅವರು ಆರೋಪಿಸಿದ್ದಾರೆ. ಆದರೆ, ಈ ರೀತಿ ಅಟ್ಟಹಾಸ ಮೆರೆದವರ ವಿರುದ್ಧ ಕ್ರಮವಾಗಿಲ್ಲ.
ಆಸ್ಪತ್ರೆ ಆವರಣದಲ್ಲಿ ದಾಳಿ ನಡೆದ ಕಾರಣ ಅಲ್ಲಿದ್ದ ಸಿಸಿ ಕ್ಯಾಮರಾ ಪ್ರಮುಖ ಸಾಕ್ಷಿ. ಹೀಗಾಗಿ ನಾಗಾರಾಜ ನಾಯ್ಕ ಅವರು ಸಿಸಿ ಕ್ಯಾಮರಾ ವಿಡಿಯೋ ಕೊಡುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ. ಆದರೆ, ವಿಡಿಯೋ ದಾಖಲೆಗಳು ಸಹ ಅವರಿಗೆ ಸಿಕ್ಕಿಲ್ಲ. ಅಪಪ್ರಚಾರ, ಹಲ್ಲೆ, ಕೊಲೆ ಪ್ರಯತ್ನ, ಬೆದರಿಕೆ ಹಾಗೂ ಸಾಕ್ಷಿನಾಶಕ್ಕೆ ಪ್ರಯತ್ನಿಸಿದ ಹಿನ್ನಲೆ ಘಟನೆ ನಡೆದ 50ನೇ ದಿನ ಅವರು ಆಸ್ಪತ್ರೆಯ ಎದುರು ಪ್ರತಿಭಟನೆಗೆ ಸಜ್ಜಾಗಿದ್ದಾರೆ.
`ಆರೋಪಿಗಳ ಪ್ರಭಾವಿಗಳಿದ್ದಾರೆ. ಹೀಗಾಗಿ ಪೊಲೀಸರು ಸಹ ಅವರನ್ನು ಬಂಧಿಸುತ್ತಿಲ್ಲ. ಸಿಸಿ ಕ್ಯಾಮರಾ ವಿಡಿಯೋ ನೀಡಲು ಆಸ್ಪತ್ರೆಯವರು ಹಿಂದೇಟು ಹಾಕಿದ್ದು, ಅನುಮಾನಕ್ಕೆ ಕಾರಣ. ನಮಗೆ ನ್ಯಾಯ ಸಿಗುವವರೆಗೂ ಹೋರಾಟ ನಿರಂತರ’ ಎಂದು ನಾಗರಾಜ ನಾಯ್ಕ ಸುದ್ದಿಗಾರರಿಗೆ ತಿಳಿಸಿದರು. `ಅಕ್ರಮ ನಡೆಸುವವರ ವಿರುದ್ಧ ತಾವು ನೀಡಿದ ದೂರು ತಮ್ಮ ಕುಟುಂಬದವರ ಮೇಲಿನ ಹಲ್ಲೆಗೆ ಕಾರಣ. ತಮಗಾದ ಅನ್ಯಾಯದ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಹಲವು ಕಡೆ ಪತ್ರ ಬರೆಯಲಾಗಿದೆ’ ಎಂದವರು ವಿವರಿಸಿದರು.