`ಪುನೀತ ರಾಜಕುಮಾರ ಅವರ ಹೆಸರಿನಲ್ಲಿ ಅನಾಥ ಆಶ್ರಮ ನಡೆಸುತ್ತಿರುವ ಸಿದ್ದಾಪುರದ ನಾಗರಾಜ ನಾಯ್ಕ ಹಾಗೂ ಅವರ ಪತ್ನಿ ಮಮತಾ ನಾಯ್ಕ ಅವರ ಮೇಲೆ ಹಲ್ಲೆ ನಡೆದಿದ್ದು, ಆರೋಪಿತರನ್ನು ಬಂಧಿಸಬೇಕು’ ಎಂದು ಕರ್ನಾಟಕ ರಣಧೀರರ ವೇದಿಕೆ ಜಿಲ್ಲಾಧ್ಯಕ್ಷ ಸೂರಜ ನಾಯ್ಕ ಅಂಕೋಲಾ ಆಗ್ರಹಿಸಿದ್ದಾರೆ.
`ಉತ್ತರ ಕನ್ನಡ, ಶಿವಮೊಗ್ಗ, ಹಾವೇರಿ ಸೇರಿ ವಿವಿಧ ಭಾಗಗಳಲ್ಲಿ ರಸ್ತೆಯಲ್ಲಿ ಬಿದ್ದಿರುವ ಅನಾಥರನ್ನು ನಾಗರಾಜ ನಾಯ್ಕ ರಕ್ಷಣೆ ಮಾಡಿ ಆಶ್ರಯ ಕಲ್ಪಿಸಿದ್ದಾರೆ. ಸರ್ಕಾರ ಹಾಗೂ ಅಧಿಕಾರಿಗಳು ಮಾಡದ ಕೆಲಸವನ್ನು ಅವರು ಮಾಡುತ್ತಿದ್ದು, ಅಂಥವರಿಗೆ ರಕ್ಷಣೆ ಅಗತ್ಯ’ ಎಂದು ಸೂರಜ ನಾಯ್ಕ ಹೇಳಿದ್ದಾರೆ. `ಸಮಾಜಮುಖಿ ಕಾರ್ಯಗಳನ್ನು ಸಹಿಸಲಾಗದವರು ಗರ್ಭಿಣಿ ಮಮತಾ ನಾಯ್ಕ ಅವರ ಕೊಲೆಗೆ ಯತ್ನಿಸಿದ್ದಾರೆ. ಜಿಲ್ಲೆಯಲ್ಲಿ ಕಾನೂನು ಸುವ್ಯಸ್ಥೆ ಹದಗೆಟ್ಟಿರುವುದಕ್ಕೆ ಇದೊಂದು ಉದಾಹರಣೆ’ ಎಂದವರು ಹೇಳಿದ್ದಾರೆ.
`ಆರೋಪಿತರ ರಕ್ಷಣೆಗೆ ಪ್ರಭಾವಿಗಳು ಕೆಲಸ ಮಾಡಿದ್ದಾರೆ. ಶಿರಸಿ-ಸಿದ್ದಾಪುರ ಭಾಗದಲ್ಲಿ ಗುಂಡಾ ವರ್ತನೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ’ ಎಂದವರು ಅಭಿಪ್ರಾಯ ವ್ಯಕ್ತಪಡಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಭೀಮಣ್ಣ ನಾಯ್ಕ ಸೇರಿ ಎಲ್ಲಾ ಅಧಿಕಾರಿಗಳು ಆಶ್ರಮಕ್ಕೆ ಭೇಟಿ ನೀಡಿ ಧೈರ್ಯ ತುಂಬಬೇಕು’ ಎಂದವರು ಆಗ್ರಹಿಸಿದರು.