ಕಳೆದ 18 ವರ್ಷಗಳಿಂದ ಬಾಳೆಪಟ್ಟಿ ತಯಾರಿಸಿ ಅಲ್ಲಿಂದ ಬರುವ ಆದಾಯದಿಂದ ದಿವ್ಯಾಂಗರ ಪುನರ್ವಸತಿ ಕಾರ್ಯ ಮಾಡುತ್ತಿರುವ ಶಿರಸಿಯ `ಪ್ರಶಾಂತಿ ಫೌಂಡೇಶನ್’ಗೆ ಶ್ರೇಷ್ಠ ಸಾಮಾಜಿಕ ಮಹಿಳಾ ವಾಣಿಜ್ಯ ಸಂಸ್ಥೆ ಎಂಬ ಪುರಸ್ಕಾರ ( Award ) ದೊರೆತಿದೆ.
ಈ ಸಂಸ್ಥೆಯ ಕಾರ್ಯದರ್ಶಿ ಮಾಲಾ ಗಿರಿಧರ ಅವರು ತಮಿಳುನಾಡಿನ ತಿರುಚಿರಾಪಲ್ಲಿಯಲ್ಲಿರುವ ಬಾಳೆ ಸಂಶೋಧನಾ ಕೇಂದ್ರದಲ್ಲಿ ಈ ಪುರಸ್ಕಾರ ( Award ) ಸ್ವೀಕರಿಸಿದರು. ಉತ್ತರ ಕನ್ನಡ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಪ್ರಧಾನ ವಿಜ್ಞಾನಿಗಳು ಆದ ಡಾ ರೂಪಾ ಪಾಟೀಲ ಈ ಕ್ಷಣಕ್ಕೆ ಸಾಕ್ಷಿಯಾದರು.
ಪ್ರಶಾಂತಿ ಫೌಂಡೇಶನ್ ಮಾರುಕಟ್ಟೆಯಲ್ಲಿ ಬೇಡಿಕೆಯಲ್ಲಿರುವ 15ಕ್ಕೂ ಅಧಿಕ ಉತ್ಪನ್ನಗಳನ್ನು ಬಾಳೆಪಟ್ಟೆಗಳಿಂದ ಉತ್ಪಾದಿಸುತ್ತದೆ. ಗ್ರಾಮೀಣ ಭಾಗಗಳಿಂದ ಬಾಳೆಪಟ್ಟೆ ಸಂಗ್ರಹಿಸಿ ಸಂಸ್ಕರಿಸುವ ಕಾರ್ಯವನ್ನು ಈ ಸಂಸ್ಥೆ ಮಾಡುತ್ತಿದೆ. ಇಲ್ಲಿನ ಉತ್ಪನ್ನಗಳಿಗೆ ದೇಶ-ವಿದೇಶಗಳಲ್ಲಿಯೂ ಬೇಡಿಕೆಯಿದೆ.
ಇದರಿಂದ ಬಂದ ಆದಾಯದಲ್ಲಿ 15 ಮಹಿಳೆಯರು ಸೇರಿ 30 ಅಂಗವಿಕಲರಿಗೆ ಸಂಸ್ಥೆ ಆಶ್ರಯ ನೀಡಿದೆ. ಅವರಿಗೆ ಮಧ್ಯಾಹ್ನದ ಊಟದ ಜೊತೆ ಮಾಸಿಕ ವೇತನವನ್ನು ಸಹ ಸಂಸ್ಥೆ ನೀಡುತ್ತದೆ. ದಿವ್ಯಾಂಗರಿಗಾಗಿ ಪ್ರವಾಸ, ಪರಿಸರ ವೀಕ್ಷಣೆ, ಭಜನೆ ಮೊದಲಾದ ಕಾರ್ಯಕ್ರಮಗಳನ್ನು ಸಹ ಈ ಸಂಸ್ಥೆ ನಡೆಸುತ್ತಿದೆ.