ಬಡ ಜನರಿಗೆ ಕೈಗಡ ಸಾಲ ನೀಡಿ ಅತ್ಯಧಿಕ ಬಡ್ಡಿ ಪಡೆದು ಸತಾಯಿಸುತ್ತಿರುವ ಹಲವರ ಮೇಲೆ ಸೋಮವಾರ ರಾತ್ರಿ ಪೊಲೀಸರು ದಾಳಿ ನಡೆಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ, ಯಲ್ಲಾಪುರ, ಮುಂಡಗೋಡು ಭಾಗದಲ್ಲಿ ಮೀಟರ್ ಬಡ್ಡಿ ದಂಧೆ ಜೋರಾಗಿದೆ. ಈ ಪೈಕಿ ಮುಂಡಗೋಡು ತಾಲೂಕಿನಿಂದಲೇ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರಿಗೆ ಅತ್ಯಧಿಕ ದೂರು ಸಲ್ಲಿಕೆಯಾಗಿದ್ದವು. ಈ ಹಿನ್ನಲೆ ಜಿಲ್ಲೆಯ ವಿವಿಧ ಭಾಗಗಳಿಂದ ಬಂದ ಪೊಲೀಸರು ಮುಂಡಗೋಡಿನಲ್ಲಿ ಅಕ್ರಮವಾಗಿ ಲೇವಾದೇವಿ ವ್ಯವಹಾರ ಮಾಡುವವರ ಮನೆ ಮೇಲೆ ದಾಳಿ ಮಾಡಿದರು.
ಸೋಮವಾರ ರಾತ್ರಿ 1 ಗಂಟೆ ವೇಳೆಗೆ ಪೊಲೀಸರು ಬಡ್ಡಿವೀರರ ಮನೆ ಬಾಗಿಲು ತಟ್ಟಿದರು. ಮಲಗಿದವರನ್ನು ಎಬ್ಬಿಸಿ ನಿದ್ದೆಗಣ್ಣಿನಲ್ಲಿಯೇ ವಿಚಾರಣೆ ನಡೆಸಿದರು. ಆ ವೇಳೆ ಮೀಟರ್ ಬಡ್ಡಿ ದಂಧೆ ನಡೆಸುವವರು ಮುಗ್ದ ಜನರಿಂದ ಪಡೆದಿದ್ದ ದಾಖಲಾತಿಗಳನ್ನು ಪರಿಶೀಲಿಸಿದರು.
ಅದಾಗಿಯೂ ದೊಡ್ಡ ಪ್ರಮಾಣದಲ್ಲಿ ಮೀಟರ್ ಬಡ್ಡಿ ನಡೆಸುವ ವ್ಯಕ್ತಿಯೊಬ್ಬನ ಮನೆಗೆ ಬೀಗ ಹಾಕಿತ್ತು. ಮಾಹಿತಿ ಸೋರಿಕೆ ಹಿನ್ನಲೆ ಆತ ಕುಟುಂಬಸಹಿತ ಪರಾರಿಯಾಗಿರುವ ಬಗ್ಗೆ ಅನುಮಾನಗಳಿವೆ. ಸಿಕ್ಕಿಬಿದ್ದ ಉಳಿದವರನ್ನು ವಿಚಾರಣೆಗಾಗಿ ಪೊಲೀಸರು ಕಾರವಾರಕ್ಕೆ ಕರೆದೊಯ್ದಿದ್ದಾರೆ.