ಅರಣ್ಯ ಹಕ್ಕು ಹೋರಾಟದಲ್ಲಿ ಸಕ್ರೀಯರಾಗಿರುವವರಿಗೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ `ಗ್ರೀನ್ ಕಾರ್ಡ’ ಗುರುತಿನ ಚೀಟಿ ಕೊಡುತ್ತಿದೆ. ಗ್ರೀನ್ ಕಾರ್ಡ ಹೊಂದಿದ ಸದಸ್ಯರಿಗೆ ಕಾನೂನು ತರಬೇತಿಯನ್ನು ನೀಡಲಾಗುತ್ತಿದ್ದು, ಅರಣ್ಯ ಸಿಬ್ಬಂದಿ ದೌರ್ಜನ್ಯದ ವಿರುದ್ಧ ಅವರೆಲ್ಲರೂ ಕಾನೂನಾತ್ಮಕ ಹೋರಾಟ ನಡೆಸಲು ಸಿದ್ಧರಾಗಿದ್ದಾರೆ!
ಯಲ್ಲಾಪುರದ ವೆಂಕಟ್ರಮಣ ಮಠದಲ್ಲಿ ಸೋಮವಾರ ಗ್ರೀನ್ಕಾರ್ಡ ಹೊಂದಿದವರಿಗೆ ಕಾನೂನು ಅರಿವು ಕಾರ್ಯಾಗಾರ ನಡೆದಿದೆ. `ಕಾನೂನಾತ್ಮಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದಕ್ಕೆ ಜ್ಞಾನ ಸಂಪಾದನೆ ಅತಿ ಮುಖ್ಯ’ ಎಂದು ಈ ವೇಳೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ. `ಅರಣ್ಯವಾಸಿಗಳ ಅರಣ್ಯ ಭೂಮಿ ಹಕ್ಕಿಗೆ ನಿರಂತರವಾದ ಹೋರಾಟ ಜರುತ್ತಿರುವ ಹಿನ್ನಲೆಯಲ್ಲಿ ಮುಂದಿನ ದಿನಗಳಲ್ಲಿ ಕಾನೂನಾತ್ಮಕ ಸಮಸ್ಯೆಗಳ ಪರಿಹಾರಕ್ಕೆ ಅರಣ್ಯವಾಸಿಗಳಿಗೆ ಕಾನೂನು ಹೋರಾಟ ಅನಿವಾರ್ಯವಾಗಿದೆ. ಈ ಹಿನ್ನಲೆ ಪ್ರತಿಯೊಬ್ಬರು ಕಾನೂನು ತಿಳುವಳಕೆ ಹೊಂದಿರಬೇಕು’ ಎಂದವರು ಪ್ರತಿಪಾದಿಸಿದರು.
`ಅರಣ್ಯ ಹಕ್ಕು ಕಾಯಿದೆಉ ಪುನರ್ ಪರಿಶೀಲನಾ ಕಾರ್ಯದಲ್ಲಿ ಅಸ್ತಿತ್ವವಿಲ್ಲದ ಸಮಿತಿಯಿಂದ ಇಲ್ಲಸಲ್ಲದ ದಾಖಲೆ ಕೇಳಲಾಗುತ್ತಿದೆ. ಕಾನೂನಿನ ಬಗ್ಗೆ ಅರಿವಿದ್ದವರು ಇದನ್ನು ಪ್ರಶ್ನಿಸಿ ತಮ್ಮನ್ನು ರಕ್ಷಿಸಿಕೊಳ್ಳುತ್ತಿದ್ದಾರೆ. ಈ ಹಿನ್ನಲೆ ಗ್ರೀನ್ಕಾರ್ಡ ಸದಸ್ಯರು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡು ದಬ್ಬಾಳಿಕೆ ವಿರುದ್ಧ ಹೋರಾಟ ನಡೆಸಬೇಕು’ ಎಂದವರು ಕರೆ ನೀಡಿದರು.
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ತಾಲೂಕಾ ಅಧ್ಯಕ್ಷ ಭೀಮಶಿ ವಾಲ್ಮೀಕಿ, ಜಿಲ್ಲಾ ಸಂಚಾಲಕ ರಾಜೇಶ ಮಿತ್ರ ನಾಯ್ಕ ತೆಂಗಿನಕೇರಿ, ಅಣ್ಣಪ್ಪ ನಾಯ್ಕ ಕಣ್ಣೀಗೇರಿ, ಅನಂತ ನಾಯ್ಕ ಕಣ್ಣೀಗೇರಿ, ಗೋಪಾಲ ಗೌಡ ಹಿತ್ಲಳ್ಳಿ, ಅನಂತ ಗೌಡ ಮಾವಿನಮನೆ, ಮಾಚಣ್ಣ ಅಲಗುಮನೆ, ಸುಭಾಷ್ ಸಿದ್ಧಿ, ಸೀತರಾಮ ನಾಯ್ಕ, ಹಬಿಬ ಕಿರುವತ್ತಿ, ಚಂದ್ರು ಪೂಜಾರಿ ಹಾಸಣಗಿ, ಅಶೋಕ ಕಾಂಬ್ಲೆ ಹೊಸಳ್ಳಿ, ದಿವಾಕರ ಮರಾಠಿ ಆನಗೋಡ, ಭಾಸ್ಕರ ಗೌಡ ಈ ಸಭೆಯಲ್ಲಿದ್ದು ಹೋರಾಟದ ರೂಪರೇಷೆಗಳ ಬಗ್ಗೆ ಚರ್ಚಿಸಿದರು.
23ಕ್ಕೆ ಶಿರಸಿಯಲ್ಲಿ ಆಕ್ಷೇಪಣಾ ಸಭೆ
ಜನವರಿ 23ರಂದು ಶಿರಸಿ ಉಪವಿಭಾಗ ಅರಣ್ಯ ಹಕ್ಕು ಸಮಿತಿಗೆ ಅಸಮರ್ಪಕ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಪುನರ್ ಪರಿಶೀಲನಾ ಕಾರ್ಯಕ್ಕೆ ಆಕ್ಷೇಪಣಾ ಪತ್ರ ಸಲ್ಲಿಸಲು ನಿರ್ಧರಿಸಲಾಗಿದೆ. ಆಕ್ಷೇಪಣಾ ಪತ್ರ ಸಲ್ಲಿಸುವ ಆಸಕ್ತರು ಅಂದು ಮುಂಜಾನೆ 10 ಗಂಟೆಗೆ ಶಿರಸಿಯ ಅರಣ್ಯ ಭೂಮಿ ಹಕ್ಕು ಹೋರಾಟಗಾರದ ಕಾರ್ಯಾಲಯಕ್ಕೆ ಹಾಜರಿರಬೇಕು ಎಂದು ನ್ಯಾಯವಾದಿ ರವೀಂದ್ರ ನಾಯ್ಕ ತಿಳಿಸಿದ್ದಾರೆ.