ಬಿಡುವಿನ ವೇಳೆ ಹವ್ಯಾಸಕ್ಕಾಗಿ ಬಟ್ಟೆಗಳಿಂದ ಹೂ ತಯಾರಿಸುವುದನ್ನು ಶುರು ಮಾಡಿದ ಶಿರಸಿಯ ಪ್ರಜ್ಞಾ ಹೆಗಡೆ ಇದೀಗ ಅದನ್ನು ತಮ್ಮ ಮುಖ್ಯ ವೃತ್ತಿಯನ್ನಾಗಿಸಿಕೊಂಡಿದ್ದಾರೆ. ಕೃತಕ ಹೂ ಮಾಲೆ ತಯಾರಿಕೆಯಿಂದಲೇ ಅವರು 30 ಮಹಿಳೆಯರಿಗೆ ಅವರು ಉದ್ಯೋಗವನ್ನು ನೀಡಿದ್ದಾರೆ. ಮಹಿಳೆಯರನ್ನು ಸ್ವಾವಲಂಬಿಯನ್ನಾಗಿಸುವ ಗುರಿಯೊಂದಿಗೆ ಮಾರ್ಚ 2ರಂದು ಶಿರಸಿಯಲ್ಲಿ ಕಾರ್ಯಾಗಾರವನ್ನು ಸಹ ಅವರು ಆಯೋಜಿಸಿದ್ದಾರೆ.
ಮೊದಲು ನೈಸರ್ಗಿಕವಾಗಿ ದೊರೆಯುವ ಹೂವುಗಳಿಂದ ಪ್ರಜ್ಞಾ ಹೆಗಡೆ ಅಂದದ ಮಾಲೆ ತಯಾರಿಸುತ್ತಿದ್ದರು. ನಂತರ ಬಳಸಿ ಬಿಸಾಡುವ ಬಟ್ಟೆಗಳನ್ನು ಬಳಸಿ ಹೂವುಗಳನ್ನು ತಯಾರಿಸಿದ್ದು, ಅದರಿಂದ ಮಾಲೆಯೊಂದನ್ನು ರಚಿಸಿದರು. ಅವರು ಪ್ರಾಯೋಗಿಕವಾಗಿ ಸಿದ್ದಪಡಿಸಿದ ಬಟ್ಟೆಯ ಹೂಮಾಲೆ ವಿಭಿನ್ನವಾಗಿದ್ದು, ಎಲ್ಲರನ್ನು ಆಕರ್ಷಿಸಿತು. ನೈಜ ಹೂವಿನಂತೆಯೇ ಗೋಚರಿಸುವ ಬಟ್ಟೆಯ ಕೃತಕ ಹೂವಿನ ಮಾಲೆ ಬಹುಬೇಗ ಪ್ರಸಿದ್ಧಿ ಪಡೆಯಿತು. ಗ್ರಾಮೀಣ ಪ್ರದೇಶದ ಮಹಿಳೆಯರೊಂದಿಗೆ ನಗರವಾಸಿಗಳ ಮನ ಗೆಲ್ಲುವಲ್ಲಿ ಕೃತಕ ಹೂವಿನ ಮಾಲೆ ಯಶಸ್ವಿಯಾಯಿತು.
ಪ್ಲಾಸ್ಟಿಕ್ ಹೂವಿನ ಮಾಲೆಗಳಿಗಿಂತ ಮೃದು, ಅಧಿಕ ಬಾಳಿಕೆ ಹಾಗೂ ಅತ್ಯುನ್ನತ ಗುಣಮಟ್ಟದ ಹೂವುಗಳು ಪ್ರಜ್ಞಾ ಹೆಗಡೆ ಅವರ ಕೈಯಲ್ಲಿ ಅರಳಿದವು. ಬಳಸಿ ಬಿಸಾಡುವ ಬಟ್ಟೆಗಳನ್ನು ಅವರು ಪ್ರಯೋಜನಕ್ಕೆ ತಂದರು. ಕ್ರಮೇಣ ತಮ್ಮೊಂದಿಗೆ ಇನ್ನಷ್ಟು ಮಹಿಳೆಯರನ್ನು ತಮ್ಮೊಂದಿಗೆ ಸೇರಿಸಿಕೊಂಡರು. ಕೃತಕ ಹೂವಿನ ಮಾಲೆಗಳಿಗೆ ಉತ್ತಮ ಬೇಡಿಕೆ ಬಂದ ಕಾರಣ ಕರಕುಶಲ ವಿಧಾನಗಳ ಬಗ್ಗೆ ಇನ್ನಿತರರಿಗೂ ಕಲಿಸಿಕೊಟ್ಟರು. ಆ ಮೂಲಕ ತಾವು ಆರ್ಥಿಕ ಸ್ವಾವಲಂಬಿಯಾಗುವುದರೊಡನೆ ತಮ್ಮನ್ನು ನಂಬಿದವರನ್ನು ಬೆಳೆಸಿದರು.
ಸಿದ್ದಾಪುರ ತಾಲೂಕಿನ ನಾಣಿಕಟ್ಟಾ ಪ್ರಜ್ಞಾ ಹೆಗಡೆ ಅವರ ತವರು. ಸದ್ಯ ನೀಲೇಕಣಿಯ ವಡಗೇರಿಯಲ್ಲಿ ಅವರ ವಾಸ. ಪಿಯುಸಿ ಓದಿರುವ ಅವರು ಶಿರಸಿ ಕೆಎಚ್ಬಿ ಕಾಲೋನಿಯಲ್ಲಿ ಪುಟ್ಟದೊಂದು ಯುನಿಟ್ ನಿರ್ಮಿಸಿಕೊಂಡಿದ್ದಾರೆ. ಮೊದಲ ಐದು ತಿಂಗಳು ವೈಫಲ್ಯ ಅನುಭವಿಸಿದರೂ ನಿರಂತರ ಪ್ರಯತ್ನದಿಂದ ಬಟ್ಟೆಯ ಹೂ ಮಾಲೆಗಳ ಲೋಕದಲ್ಲಿ ಪ್ರಜ್ಞಾ ಹೆಗಡೆ ಬದುಕು ಕಟ್ಟಿಕೊಂಡಿದ್ದಾರೆ. ಹೀಗಾಗಿ ಕಳೆದ ಆರು ವರ್ಷಗಳಿಂದ ಪ್ರಜ್ಞಾ ಹೆಗಡೆ ಅವರು ಹೂ ಮಾಲೆ ತಯಾರಿಸುತ್ತಿದ್ದಾರೆ. ಅವರು ತಯಾರಿಸಿದ ಬಟ್ಟೆಯ ಕೃತಕ ಹೂ ಮಾಲೆಗಳು ಪ್ರಪಂಚದ ಬೇರೆ ಬೇರೆ ಭಾಗಗಳಿಗೆ ರಪ್ತಾಗುತ್ತದೆ. ಆನ್ಲೈನ್ ಮಾರುಕಟ್ಟೆ ವ್ಯವಸ್ಥೆ ಅವರನ್ನು ಮುನ್ನಡೆಸುತ್ತಿದೆ. ಬಿಡುವಿನ ವೇಳೆ ಶ್ರದ್ಧೆ – ಸಹನೆಯಿಂದ ಈ ಕೆಲಸ ಮಾಡಿದರೆ ಪ್ರತಿಯೊಬ್ಬ ಮಹಿಳೆಯರು ಉತ್ತಮ ಆದಾಯದೊಂದಿಗೆ ಬದುಕಬಹುದು ಎಂದು ಪ್ರಜ್ಞಾ ಹೆಗಡೆ ತೋರಿಸಿಕೊಟ್ಟಿದ್ದಾರೆ.
ಇನ್ನೂ ಅಚ್ಚರಿಯ ಸಂಗತಿ ಎಂದರೆ, ನೈಸರ್ಗಿಕ ಹೂಮಾಲೆಗಳಿಗಿಂತಲೂ ಬಟ್ಟೆಯಿಂದ ತಯಾರಿಸುವ ಹೂಮಾಲೆಗಳ ದರ ಅಗ್ಗ. ಒಮ್ಮೆ ಖರೀದಿಸಿದವರು 10 ವರ್ಷದವರೆಗೂ ನಿರಂತರವಾಗಿ ಬಳಸಿದರೂ ಅದರ ಅಂದ ಮಾಸಲ್ಲ. ಹೀಗಾಗಿ ಸಭೆ-ಸಮಾರಂಭಗಳ ಅಲಂಕಾರಗಳಿಗೆ ಈ ಬಗೆಯ ಹೂ ಮಾಲೆಗಳು ಹೆಚ್ಚಾಗಿ ಬಳಕೆಯಾಗುತ್ತವೆ. ಮದುವೆ-ಮುಂಜಿ ಸೇರಿ ಬಗೆ ಬಗೆಯ ಶುಭ ಕಾರ್ಯಕ್ರಮಗಳಲಂತೂ ಇದೀಗ ಬಟ್ಟೆಯ ಹೂ ಮಾಲೆಗಳದ್ದೇ ಅಬ್ಬರ ಇನ್ನಷ್ಟು ಹೆಚ್ಚಾಗಿದೆ. ಮಹಿಳೆಯರ ಆರ್ಥಿಕ ಸ್ವಾವಲಂಬನೆಗಾಗಿ ಶ್ರಮಿಸುತ್ತಿರುವ ಪ್ರಜ್ಞಾ ಹೆಗಡೆ ಇನ್ನಷ್ಟು ಮಹಿಳೆಯರನ್ನು ತಮ್ಮೊಂದಿಗೆ ಕರೆದೊಯ್ಯಲು ಸಿದ್ಧರಾಗಿದ್ದಾರೆ. ಇದಕ್ಕಾಗಿ ಮಾರ್ಚ 2ರಂದು ಅವರು ಶಿರಸಿಯಲ್ಲಿ ವಿಶೇಷ ಕಾರ್ಯಾಗಾರವನ್ನು ಆಯೋಜಿಸಿದ್ದಾರೆ. ಶಿಬಿರದಲ್ಲಿ ಭಾಗವಹಿಸಿದವರಿಗೆ ಹೂ ಮಾಲೆ ತಯಾರಿಕೆಯ ವಿಧಾನಗಳ ಬಗ್ಗೆ ಮಾಹಿತಿ ಕೊಡುತ್ತಾರೆ. ಬಿಡುವಿನ ವೇಳೆ ಮಹಿಳೆಯರು ಸಿದ್ಧಪಡಿಸುವ ಬಟ್ಟೆಯ ಹೂ ಮಾಲೆಗಳನ್ನು ಸಹ ಅವರೇ ಖರೀದಿಸುತ್ತಾರೆ.
ತರಬೇತಿಗೆ ಬರುವಾಗ ಆಧಾರ್ ಕಾರ್ಡ ಜೊತೆ ಎರಡು ಫೋಟೋ ತರಲು ಮರೆಯದಿರಿ. ಪ್ರಜ್ಞಾ ಹೆಗಡೆ ಅವರೊಂದಿಗೆ ಮಾತನಾಡಲು ಇಲ್ಲಿ ಫೋನ್ ಮಾಡಿ: 86606065953
ಕಾರ್ಯಾಗಾರ ಉಚಿತ. ಮಹಿಳಾ ಸ್ವಾವಲಂಬನೆ ನಿಶ್ಚಿತ!
#sponsored