ಕುಮಟಾ ರಸ್ತೆ ಅಂಚಿನ ಹಲವು ಕಡೆ ಒಡೆದ ಬಿಯರ್ ಬಾಟಲಿ ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ವ್ಯಾಪಕವಾಗಿದೆ. ಮಾಸೂರಿನ ಲುಕ್ಕೇರಿಯಲ್ಲಿ ಪಡ್ಡೆ ಹುಡುಗರ ಕಾಟ ವಿಪರೀತವಾಗಿದ್ದು, ರಸ್ತೆ ಅಂಚಿನಲ್ಲಿ ಗಾಜು ಒಡೆಯುವವರ ಉಪಟಳದಿಂದ ಊರಿನ ಜನ ಬೇಸತ್ತಿದ್ದಾರೆ.
ಮಾಸೂರಿನ ಗಜನಿ ಪಕ್ಕ ಸದಾ ಬಿಯರ್ ಬಾಟಲಿ, ಸಿಗರೇಟಿನ ತುಂಡು ಕಾಣಿಸುತ್ತದೆ. ಅದರೊಂದಿಗೆ ಪ್ಲಾಸ್ಟಿಕ್ ಬಾಟಲಿಗಳ ರಾಶಿಯೂ ದೊಡ್ಡದಾಗಿ ಬಿದ್ದಿರುತ್ತದೆ. ಅನೇಕ ಬಾರಿ ಇಲ್ಲಿ ಪಡ್ಡೆ ಹುಡುಗರು ಮೋಜು-ಮಸ್ತಿಯಲ್ಲಿ ತೊಡಗಿದ್ದರೂ ಅವರನ್ನು ಪ್ರಶ್ನಿಸುವವರಿಲ್ಲ. ಪ್ರಶ್ನಿಸಿದವರನ್ನು ಗುರಿಯಾಗಿರಿಸಿಕೊಂಡು ದಾಳಿ ಮಾಡುವ ಸಾಧ್ಯತೆಗಳಿರುವುದರಿಂದ ಅವರ ಕಾಟಕ್ಕೆ ಊರಿನವರು ಮೌನವಾಗಿದ್ದಾರೆ.
ಭಾನುವಾರ ಬೆಳಗ್ಗೆ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ಆ ಪ್ರದೇಶಕ್ಕೆ ಭೇಟಿ ನೀಡಿದರು. ಅಲ್ಲಿನ ಅಶುಚಿತ್ವದ ಬಗ್ಗೆ ಮರುಕ ವ್ಯಕ್ತಪಡಿಸಿದ ಅವರು ತಮ್ಮ ತಂಡದವರ ಜೊತೆ ಸೇರಿ ಶ್ರಮದಾನ ಮಾಡಿದರು. ಮಾಸೂರಿನ ಗಜನಿ ಪಕ್ಕ ಕುಡುಕರ ಉಪಟಳ ಹೆಚ್ಚಾಗಿರುವ ಬಗ್ಗೆ ಅವರು ಆತಂಕ ವ್ಯಕ್ತಪಡಿಸಿದರು. ಹೆಂಗಸರು-ಮಕ್ಕಳು ಓಡಾಡುವ ಪ್ರದೇಶದಲ್ಲಿ ಪೊಲೀಸರು ಗಸ್ತು ತಿರುಗಬೇಕು ಎಂದವರು ಒತ್ತಾಯಿಸಿದರು.

`ಇಲ್ಲಿನ ಅಕ್ರಮ ಚಟುವಟಿಕೆಗಳನ್ನು ಪೊಲೀಸರು ತಡೆಯಬೇಕು. ಭವಿಷ್ಯದಲ್ಲಿ ಅನಾಹುತ ನಡೆದರೆ ಅದಕ್ಕೆ ಪೊಲೀಸರು ಉತ್ತರಿಸಬೇಕಾಗುತ್ತದೆ. ಹೆಗಡೆ ಗ್ರಾಮ ಪಂಚಾಯತ ಅಧಿಕಾರಿಗಳು ಸಹ ಈ ಪ್ರದೇಶದ ಸ್ವಚ್ಛತೆ ಬಗ್ಗೆ ಗಮನಿಸಬೇಕು. ಲಕ್ಕೇರಿ ಹಾಗೂ ಸುತ್ತಲು ಪರಿಸರ ನಾಶ ಮಾಡುತ್ತಿರುವವರ ವಿರುದ್ಧ ಕ್ರಮವಾಗಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಸುಧಾಕರ ನಾಯ್ಕ, ಬಾಳ ನಾಯ್ಕ, ಈಶ್ವರ ಗೌಡ ಇತರರು ಆಗ್ರಹಿಸಿದರು.