ಶಿರಸಿ: ಶಿರಸಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ಸಿನ ಟಯರ್ ಸ್ಪೋಟವಾಗಿದೆ. ಇದರಿಂದ ಬಸ್ಸಿನಲ್ಲಿದ್ದ ಪ್ರಯಾಣಿಕರು ತೊಂದರೆ ಅನುಭವಿಸಿದರು.
ಬುಧವಾರ ಬೆಳಗ್ಗೆ 8.30ಕ್ಕೆ ಶಿರಸಿಯಿಂದ ಬೆಂಗಳೂರಿಗೆ ಬಸ್ಸು ಹೊರಟಿತು. ಸಿದ್ದಾಪುರ, ಸಾಗರ, ಕಡೂರು, ಶಿವಮೊಗ್ಗ ಸೇರಿ ನಾನಾ ಭಾಗಗಳಿಗೆ ತೆರಳುವ ಪ್ರಯಾಣಿಕರು ಈ ಬಸ್ಸಿನಲ್ಲಿದ್ದರು. ಸಿದ್ದಾಪುರ ತಾಲೂಕಿನ ಕಾನಸೂರಿನ ಬಳಿ ಬಸ್ಸಿನ ಹಿಂದಿನ ಟಯರ್ ಸ್ಪೋಟವಾಗಿದ್ದು, ಆ ಸದ್ದಿಗೆ ಪ್ರಯಾಣಿಕರು ಕಕ್ಕಾಬಿಕ್ಕಿಯಾದರು.
ಟಯರ್ ಸ್ಪೋಟಗೊಂಡಿದ್ದರಿAದ ಬಸ್ಸು ಸಹ ಎಡಕ್ಕೆ ವಾಲಿದ್ದು, ನಿಯಂತ್ರಣ ತಪ್ಪುವ ಮೊದಲೇ ಬಸ್ಸನ್ನು ಚಾಲಕ ನಿಲ್ಲಿಸಿದರು. ಬಸ್ಸು ರಸ್ತೆ ಪಕ್ಕ ನಿಂತಾಗ ಒಳಗಿದ್ದ ಪ್ರಯಾಣಿಕರನ್ನು ಕೆಳಗಿಳಿಸಲಾಯಿತು. ಸಮಯಕ್ಕೆ ಸರಿಯಾಗಿ ಊರು ಸೇರಲಾರದೇ ಜನ ತೊಂದರೆ ಅನುಭವಿಸಿದರು. ಈ ಪೈಕಿ ಕೆಲವರು `ಟಿಕೆಟ್ ಹಣ ಮರಳಿಸಿ’ ಎಂದು ಪಟ್ಟು ಹಿಡಿದರು. ಇನ್ನೂ ಕೆಲವರು ಬೇರೆ ವಾಹನದ ಮೂಲಕ ಸಂಚಾರ ನಡೆಸಿದರು.
`ಹೊಸದಾಗಿ ಕಾಣುವ ಬಸ್ಸಿಗೆ ಹಳೆ ಟಯರ್ ಅಳವಡಿಸಿದ ಕಾರಣ ಈ ಸ್ಪೋಟ ನಡೆದಿದೆ’ ಎಂದು ಜನ ದೂರಿದರು. ರಾಜಧಾನಿಗೆ ತೆರಳುವ ಬಸ್ಸಿನ ನಿರ್ವಹಣೆಯನ್ನು ಸರಿಯಾಗಿ ನೋಡಿಕೊಳ್ಳದ ಕಾರಣ ಅಸಮಧಾನ ವ್ಯಕ್ತಪಡಿಸಿದರು.