ಸರ್ಕಾರ ನೀಡುವ ಪ್ರಶಸ್ತಿ ಪಡೆಯಬೇಕು ಎಂದರೆ ಮೊದಲು ಅದಕ್ಕೆ ಅರ್ಜಿ ಹಾಕಬೇಕು. ನಂತರ ಶಾಸಕ-ಸಚಿವರ ಶಿಪಾರಸ್ಸು ಪತ್ರ ಹಿಡಿದು ಲಾಭಿ ಮಾಡಬೇಕು. ಆಗಲೂ ಆಗದಿದ್ದರೆ ದೊಡ್ಡ ದೊಡ್ಡ ವ್ಯಕ್ತಿಗಳಿಂದ ಫೋನ್ ಮಾಡಿಸಿ ಒತ್ತಡ ತರಬೇಕು. ಬಿಜೆಪಿ-ಕಾಂಗ್ರೆಸ್ ಸೇರಿ ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಈ ರಾಜಕೀಯ ಲಾಭಿ ತಪ್ಪಿದ್ದಲ್ಲ. ಆದರೆ, ಪ್ರಶಸ್ತಿಗಾಗಿ ಇಷ್ಟೆಲ್ಲ ಸರ್ಕಸ್ಸು ಮಾಡಲಾಗದ ಶಿಕ್ಷಕರು ಅರ್ಹತೆ ಇದ್ದರೂ ಪ್ರಶಸ್ತಿ-ಪುರಸ್ಕಾರಗಳಿಲ್ಲದೇ ತಮ್ಮ ಪಾಡಿಗೆ ತಾವು ಪಾಠ ಮಾಡುತ್ತಿದ್ದಾರೆ!
ನಾಗರಿಕ ಸೇವಾ ನಿಯಮಗಳ ಪ್ರಕಾರ ಯಾವುದೇ ಸರ್ಕಾರಿ ನೌಕರರು ರಾಜಕೀಯ ಪಕ್ಷಗಳ ಜೊತೆ ಗುರುತಿಸಿಕೊಳ್ಳುವ ಹಾಗಿಲ್ಲ. ರಾಜಕಾರಣಿಗಳ ಶಿಫಾರಸ್ಸುಗಳನ್ನು ತರುವ ಹಾಗಿಲ್ಲ. ಆದರೆ, ಈ ನಿಯಮಗಳನ್ನು ಬಹುತೇಕರು ಪಾಲಿಸುತ್ತಿಲ್ಲ. ಪ್ರತಿ ಬಾರಿ ಪ್ರಶಸ್ತಿ ಘೋಷಣೆಗೂ ಮುನ್ನ ಅನೇಕ ಲಾಭಿ ನಡೆಯುತ್ತಿದ್ದು, ಶಿಕ್ಷಣ ಕ್ಷೇತ್ರ ಸಹ ಇದರಿಂದ ಹೊರತಾಗಿಲ್ಲ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸರ್ಕಾರಿ ನೌಕರರನ್ನು ಸಹ ಕಾಂಗ್ರೆಸ್ಸಿಕರಣ ಮಾಡುವ ಪ್ರಯತ್ನ ನಡೆಸಿದೆ. ಇದೇ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷವೇ `ಶಿಕ್ಷಕರ ಪ್ರಶಸ್ತಿ’ ಘೋಷಿಸಿದೆ. ಕಾಂಗ್ರೆಸ್ ಪಕ್ಷದ ಆಳುಗಳ ಹಾಗೇ ನಾಗರಿಕ ಸೇವಾ ನಿಯಮ ಪಾಲಿಸುವುದಾಗಿ ಪ್ರತಿಜ್ಞೆ ಮಾಡಿ ಸೇವೆಗೆ ಸೇರಿದ ಸರ್ಕಾರಿ ನೌಕರರು ಅದನ್ನು ಮರೆತು ಆ ಪ್ರಶಸ್ತಿ ಬೆಂಗಳೂರಿಗೆ ಓಡಿದ್ದಾರೆ!
ಶಿಕ್ಷಕರನ್ನು ಓಲೈಸಿಕೊಂಡರೆ ಅವರ ಮೂಲಕ ಮಕ್ಕಳ ಹಾಗೂ ಅವರ ಪಾಲಕರ ಮೇಲೆ ರಾಜಕೀಯ ಪ್ರಭಾವ ಬೀರುವುದು ಸುಲಭ. ಈ ಹಿನ್ನಲೆಯಲ್ಲಿ ಯಾವುದೇ ಸರ್ಕಾರ ಬಂದರೂ ಪ್ರಭಾವಿ ಶಿಕ್ಷಕರನ್ನು ಬುಟ್ಟಿಗೆ ಹಾಕಿಕೊಳ್ಳುವ ಪ್ರಯತ್ನ ನಡೆಸುವುದು ಹೊಸದಲ್ಲ. ಆದರೆ, ಪಕ್ಷದ ಹೆಸರಿನಲ್ಲಿ ಪ್ರಶಸ್ತಿ ನೀಡಿ ಶಿಕ್ಷಕರನ್ನು ರಾಜಕೀಯವಾಗಿ ಕಲುಷಿತಗೊಳಿಸುತ್ತಿರುವ ಪ್ರಯತ್ನ ಮೊದಲು. ಎಷ್ಟೇ ಲಾಭಿ-ಶಿಫಾರಸ್ಸು-ಕಸರತ್ತು ನಡೆದಿದ್ದರೂ ಈವರೆಗೆ ಸರ್ಕಾರದಿಂದಲೇ ತಾಲೂಕಾ ಮಟ್ಟದಿಂದ ಹಿಡಿದು ರಾಜ್ಯಮಟ್ಟದವರೆಗೆ ಪ್ರಶಸ್ತಿಗಳ ವಿತರಣೆ ನಡೆಯುತ್ತಿತ್ತು. ಆದರೆ, ಇದೀಗ ತಮ್ಮ ಸರ್ಕಾರದಿಂದ ಪ್ರಶಸ್ತಿ ಸಿಗದವರಿಗೆ ಪಕ್ಷದಿಂದ ಕೊಟ್ಟು ಸಮಾದಾನ ಮಾಡುವ ನಿಟ್ಟಿನಲ್ಲಿ ಕಾಂಗ್ರೆಸ್ ಪ್ರಶಸ್ತಿ ನೀಡಲು ಶುರು ಮಾಡಿದೆ. ಇದಕ್ಕಾಗಿ ‘ಶಿಕ್ಷಕರ ಕಾಂಗ್ರೆಸ್ ಘಟಕ’ವನ್ನು ಸ್ಥಾಪಿಸಿ ನೌಕರರನ್ನು ಪಕ್ಷದ ಸದಸ್ಯರನ್ನಾಗಿಸಿದೆ.
`ಸರ್ಕಾರಿ ಪ್ರಶಸ್ತಿಗೆ ಯಾರೂ ಅರ್ಜಿ ಸಲ್ಲಿಸುವಂತಿರಬಾರದು. ಸರ್ಕಾರವೇ ಯೋಗ್ಯರನ್ನು ಗುರುತಿಸಿ ಪ್ರಶಸ್ತಿ ನೀಡುವ ಹಾಗಾಗಬೇಕು’ ಎಂಬುದು ನೊಂದ ಶಿಕ್ಷಕರ ಅಭಿಪ್ರಾಯ.