ಮಕ್ಕಳ ಹೊಟ್ಟೆಗೆ ಭಕ್ತಿಯಿಂದ ಸೂಜಿ ಚುಚ್ಚುವ ಮಾರ್ಕೇಪೋನವ್ ಜಾತ್ರೆ ಕಾರವಾರದ ಮಾಜಾಳಿಯಲ್ಲಿ ಎರಡು ದಿನ ರಾತ್ರಿ ಶೃದ್ಧಾಭಕ್ತಿಯಿಂದ ನಡೆದಿದ್ದು, ಅಷ್ಟೇ ಶ್ರದ್ಧಾ-ಭಕ್ತಿಯಿಂದ ಕೆಲವರು ಜೂಜಾಟವನ್ನು ನಡೆಸಿದರು!
ರಾಜಾರೋಷವಾಗಿ ಜೂಜಾಟ ನಡೆಯುತ್ತಿದ್ದರೂ ಇದನ್ನು ಪ್ರಶ್ನಿಸುವವರಿರಲಿಲ್ಲ. ಹರಕೆಯ ನಿಮಿತ್ತ ಮಕ್ಕಳ ಹೊಕ್ಕಳಿಗೆ ಸೂಚಿ ದಾರ ಪೋಣಿಸುವ ಸಂಪ್ರದಾಯವನ್ನು ಜಾತ್ರೆಯಲ್ಲಿ ಆಚರಿಸಲಾಯಿತು. ಇದರೊಂದಿಗೆ ಇದೇ ಮೊದಲ ಬಾರಿ ಜಾತ್ರೆಯಲ್ಲಿ ಜೂಜಾಟ ನಡೆದಿದ್ದು, ಹಣ ಹೂಡಿದವರಿಗೆ ದುಪ್ಪಟ್ಟು ಹಣ ನೀಡುವ ಆಮೀಷದೊಂದಿಗೆ ಕೆಲವರು ವಿವಿಧ ಆಟ ಆಡಿಸಿದರು.
10 ವರ್ಷದ ಹಿಂದೆ ಈ ಜಾತ್ರೆಯಲ್ಲಿ ಒಮ್ಮೆ ಜೂಜಾಟ ನಡೆದಿತ್ತು. ಆಗ ಭಕ್ತರು ಆಕ್ಷೇಪಿಸಿದ್ದರು. ಅದಾದ ನಂತರ ಹಣ ಹೂಡುವ ಆಟವನ್ನು ಆಡಿರಲಿಲ್ಲ. ಆದರೆ, ಈ ಬಾರಿ ಮತ್ತೆ ಜಾತ್ರೆ ವಿಶೇಷವಾಗಿ ಹಣ ಹೂಡಿಕೆಯ ಆಟ ನಡೆಯಿತು. ಫೆ 12 ಹಾಗೂ 13ರ ರಾತ್ರಿಯಿಡಿ ಈ ಆಟ ನಡೆಯುತ್ತಿತ್ತು.
ಸುಮಾರು 10 ಜೂಜಾಟದ ಮಳಿಗೆಗಳು ಜಾತ್ರೆಯಲ್ಲಿದ್ದವು. ಇದರೊಂದಿಗೆ ಬಣ್ಣದ ಬಾಲಿನ ಆಟಗಳಲ್ಲಿಯೂ ದುಪ್ಪಟ್ಟು ಹಣ ನೀಡುವ ಆಮೀಷಗಳು ಕಾಣಿಸಿದವು. ಆದರೆ, ಕಾನೂನುಬಾಹಿರ ಜೂಜಾಟದ ಬಗ್ಗೆ ಯಾರೂ ಪ್ರಶ್ನಿಸಲಿಲ್ಲ.