ಭಟ್ಕಳ: 2015ರಲ್ಲಿ ಅಮೇರಿಕ ಅಧ್ಯಕ್ಷರಾಗಿದ್ದ ಬರಾಕ್ ಒಬಾಮಾ ಭಾರತಕ್ಕೆ ಭೇಟಿ ನೀಡಿದಾಗ ಅವರ ಮೇಲೆ ಭಯೋತ್ಪಾದನಾ ದಾಳಿ ನಡೆಸಲು ಸಂಚು ರೂಪಿಸಿದ್ದ ಮೂವರಿಗೆ ಬೆಂಗಳೂರಿನ ವಿಶೇಷ ಎನ್ಐಎ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.
ಭಟ್ಕಳದ ಸೈಯದ್ ಇಸ್ಮಾಯಿಲ್ ಅಫಾಕ್ ಲಂಕಾ (44), ಆತನ ಸೋದರ ಸಂಬoಧಿಯಾದ ಎಂಬಿಎ ವಿದ್ಯಾರ್ಥಿ ಅಬ್ದುಲ್ ಸಬೂರ್ (34) ಮತ್ತು ಸ್ಕ್ರ್ಯಾಪ್ ಡೀಲರ್ ಸದ್ದಾಂ ಹುಸೇನ್ (46) ದುಷ್ಕೃತ್ಯಕ್ಕೆ ಸಂಚು ರೂಪಿಸಿದ್ದು ಸಾಬೀತಾಗಿದೆ. 2015ರ ಜನವರಿ 26ರ ಗಣರಾಜ್ಯೋತ್ಸವದಂದು ಸ್ಫೋಟಗಳನ್ನು ನಡೆಸಲು ಈ ಎಲ್ಲರೂ ಸೇರಿ ಒಬಮಾ ಹತ್ಯೆಗೆ ಸಂಚು ರೂಪಿಸಿದ್ದರು. ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಭಟ್ಕಳದ ರಿಯಾಜ್ ಅಹ್ಮದ್ ಮತ್ತು ಜೈನುಲ್ಬುದ್ದೀನ್ ಎಂಬಾತರನ್ನು ಸಾಕ್ಷಿ ಕೊರತೆಯಿಂದ ಬಿಡುಗಡೆ ಮಾಡಲಾಗಿದೆ.
ಭಟ್ಕಳದ ನಿವಾಸಿ ಅಫಾಕ್ ಲಂಕಾನನ್ನು ಯುಎಪಿಎ ಸೆಕ್ಷನ್ 13, 20, 23ಮತ್ತು 38ರ ಅಡಿಯಲ್ಲಿ ಹಾಗೂ ಸ್ಫೋಟಕಗಳ ಕಾಯ್ದೆಯ ಸೆಕ್ಷನ್ 4 ಮತ್ತು 55ರ ಅಡಿಯಲ್ಲಿ ಅಪರಾಧಿ ಎಂದು ಘೋಷಿಸಲಾಗಿದೆ. ಭಟ್ಕಳದ ಮುಖ್ಯ ರಸ್ತೆಯಲ್ಲಿ ಕ್ಲಿನಿಕ್ ಹೊಂದಿದ್ದ ಹೋಮಿಯೋಪಥಿಕ್ ವೈದ್ಯ ಅಫಾಕ್ ಲಂಕಾ ಪಾಕಿಸ್ತಾನಿ ಪ್ರಜೆಯನ್ನು ಮದುವೆಯಾಗಿದ್ದ. ಪಾಕಿಸ್ತಾನಿ ಭಯೋತ್ಪಾದಕ ಗುಂಪುಗಳೊoದಿಗೆ ಸಂಪರ್ಕವನ್ನು ಇಟ್ಟುಕೊಂಡಿದ್ದ. ತನ್ನ ಪತ್ನಿಯನ್ನು ಭೇಟಿ ಮಾಡುವ ನೆಪದಲ್ಲಿ ಆತ ಪಾಕಿಸ್ತಾನದಲ್ಲಿ ಭಯೋತ್ಪಾದಕ ತರಬೇತಿ ಪಡೆದಿದ್ದ ಎಂದು ದೂರಲಾಗಿದೆ. ಮುಂಬೈ, ಪುಣೆ ಮತ್ತು ದೆಹಲಿ ಬಾಂಬ್ ಸ್ಫೋಟಗಳಿಗೆ ಸ್ಫೋಟಕಗಳನ್ನು ಪೂರೈಸುವಲ್ಲಿ ಈತ ಭಾಗಿಯಾಗಿದ್ದ ಎಂಬ ಆರೋಪವಿದೆ.
ಭಟ್ಕಳದ ನಿವಾಸಿ ಅಬ್ದುಲ್ ಸಬೂರ್ ಮತ್ತು ಹುಸೇನ್ ಅವರನ್ನು ಯುಎಪಿಎ ಸೆಕ್ಷನ್ 13 ಮತ್ತು 23 ಮತ್ತು ಸ್ಫೋಟಕ ಕಾಯ್ದೆಯ ಸೆಕ್ಷನ್ 4 ಮತ್ತು 5ರ ಅಡಿಯಲ್ಲಿ ದೋಷಿ ಎಂದು ಘೋಷಿಸಲಾಗಿದೆ. ವಿಶೇಷ ಎನ್ಐಎ ನ್ಯಾಯಾಲಯದ ಪ್ರಕಾರ, ಪ್ರಮುಖ ಆರೋಪಿಗಳಾದ ರಿಯಾಜ್ ಭಟ್ಕಳ್ ಮತ್ತು ಇಕ್ಬಾಲ್ ಭಟ್ಕಳ ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದಾರೆ.
ತಮಿಳುನಾಡಿನ ಚರ್ಚ್ ಸ್ಟ್ರೀಟ್ನಲ್ಲಿ 2014ರ ಡಿ.30ರಂದು ನಡೆದ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬAಧಿಸಿದAತೆ, ಜನವರಿ 8, 2015ರಂದು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ತಂಡವು ಬೆಂಗಳೂರಿನ ಪುಲಕೇಶಿನಗರ ಪ್ರದೇಶದಲ್ಲಿ ಅಫಾಕ್ ಲಂಕಾನನ್ನು ಬಂಧಿಸಿದಾಗ ಒಬಾಮಾ ಭೇಟಿ ಸಂದರ್ಭ ಭಯೋತ್ಪಾದನಾ ಸಂಚು ರೂಪಿಸಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಆತನ ವಿಚಾರಣೆಯಿಂದ ಇತರ ಶಂಕಿತ ಭಯೋತ್ಪಾದಕರ ಬಂಧನಕ್ಕೆ ಕಾರಣವಾಯಿತು. ಭಟ್ಕಳದ ಮನೆಯೊಂದರಲ್ಲಿ ಸ್ಫೋಟಕಗಳನ್ನು ಸಂಗ್ರಹಿಸಿಟ್ಟಿದ್ದಾಗಿ ಅಫಾಕ್ ಲಂಕಾ ವಿಚಾರಣೆಯಲ್ಲಿ ತಪ್ಪೊಪ್ಪಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದರು. ನಂತರ ಸಿಸಿಬಿ ತಂಡವು ಸ್ಥಳದಿಂದ ಬಾಂಬ್ಗಳು ಮತ್ತು ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡಿತ್ತು.
ಪ್ರಕರಣದ ತನಿಖೆಯನ್ನು ಆರಂಭದಲ್ಲಿ ಸಿಸಿಬಿಯ ಎಸಿಪಿ ಓಂಕಾರಯ್ಯ ಮತ್ತು ತಮ್ಮಯ್ಯ ನೇತೃತ್ವದಲ್ಲಿ ನಡೆದಿತ್ತು. ನಂತರ ರಾಷ್ಟ್ರೀಯ ತನಿಖಾ ಸಂಸ್ಥೆ ಪ್ರಕರಣವನ್ನು ಕೈಗೆತ್ತಿಕೊಂಡು 2000 ಪುಟಗಳ ಚಾರ್ಜ್ಶೀಟ್ ಸಲ್ಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು. ಆರೋಪಿಗಳು 2015ರಿಂದ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿದ್ದಾರೆ.
ಇನ್ನಿಬ್ಬರು ಆರೋಪಿಗಳಾದ ಭಟ್ಕಳದ ರಿಯಾಜ್ ಅಹ್ಮದ್ ಮತ್ತು ಜೈನುಲ್ಬುದ್ದೀನ್ ಅವರನ್ನು ಯುಎಪಿಎ ಸೆಕ್ಷನ್ 13 ಮತ್ತು 23 ಮತ್ತು ಸ್ಫೋಟಕಗಳ ಕಾಯ್ದೆಯ ಸೆಕ್ಷನ್ 4 ಮತ್ತು 5 ರ ಅಡಿಯಲ್ಲಿ ಖುಲಾಸೆಗೊಳಿಸಲಾಗಿದೆ.