ಕಿಡಿಗೇಡಿ ಅರ್ಚಕರ ಮಾತು ನಂಬಿ ಗೋಕರ್ಣ ದೇವಾಲಯ ಆಡಳಿತ ಮಂಡಳಿಯವರ ಮೇಲೆ ಅನುಮಾನಪಟ್ಟಿದ್ದ ಭೂಪತಿ ಇದೀಗ ಸ್ವತಃ ಕಾರ್ಯಾಚರಣೆಗಿಳಿದು ಚಿನ್ನ ಕದ್ದವರ ಹುಡುಕಾಟ ಶುರು ಮಾಡಿದ್ದಾರೆ. ಮತ್ತೆ ಶ್ರೀಕ್ಷೇತ್ರಕ್ಕೆ ಬಂದ ಅವರು ಸಿಸಿ ಕ್ಯಾಮರಾ ದಾಖಲೆಗಳನ್ನು ಪರಿಶೀಲಿಸಿ ತಮ್ಮ ಬ್ರೆಸ್ಲೈಟ್ ಎಗರಿಸದವರನ್ನು ಪತ್ತೆ ಮಾಡಿದ್ದಾರೆ.
ಆಂದ್ರಪ್ರದೇಶದ ಭೂಪತಿ ರಾವ್ ಕಾರವಾರದ ಹಬ್ಬುವಾಡ ರಾಘವೇಂದ್ರ ಮಠದ ಬಳಿ ವಾಸವಾಗಿದ್ದಾರೆ. ಫೆ 8ರಂದು ಅವರು ತಮ್ಮ ಬಳಿಯಿದ್ದ 1.60 ಲಕ್ಷ ರೂ ಮೌಲ್ಯದ ಬ್ರೇಸ್ಲೈಟನ್ನು ಬಲಗೈಗೆ ಧರಿಸಿಕೊಂಡಿದ್ದರು. ಅದಾದ ನಂತರ ಹೆಂಡತಿ-ಮಕ್ಕಳ ಜೊತೆ ಗೋಕರ್ಣಕ್ಕೆ ತೆರಳಿದ್ದರು. ನಂದಿ ಮಂಟಪದ ಬಳಿ ನಿಂತಿರುವಾಗ ಅವರ ಕೈಯಲ್ಲಿದ್ದ ಬ್ರೇಸ್ ಲೈಟ್ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ದೇವರ ಮೇಲಿದ್ದ ಭಕ್ತಿ ಬ್ರೇಸ್ ಲೈಟ್ ಕಡೆ ತಿರುಗಿದ್ದು, ಅಲ್ಲಿ ಅವರು ಅದರ ಹುಡುಕಾಟ ನಡೆಸಿದ್ದಾರೆ. ಆದರೆ, ಬ್ರೇಸ್ ಲೈಟ್ ಮಾತ್ರ ಸಿಕ್ಕಿಲ್ಲ. ಹೀಗಾಗಿ ಅಕ್ಕ-ಪಕ್ಕದಲ್ಲಿರುವ ಭಕ್ತರನ್ನು ಅವರು ಒಮ್ಮೆ ಅನುಮಾನದಿಂದ ನೋಡಿದರು.
ಈ ವೇಳೆ ಅಲ್ಲಿದ್ದ ಕಿಡಿಗೇಡಿ ಅರ್ಚಕರೊಬ್ಬರು ತಮಗೆ ಆಗದ ಆಡಳಿತ ಮಂಡಳಿಯವರ ಮೇಲೆ ಗೂಬೆ ಕೂರಿಸಿದ್ದಾರೆ. ಅದನ್ನು ನಂಬಿದ ಭೂಪತಿ ಆಡಳಿತ ಮಂಡಳಿಯವರ ಜೊತೆ ಪೊಲೀಸರ ವಿರುದ್ಧವೂ ಕೂಗಾಡಿದ್ದಾರೆ. ಕೊನೆಗೆ ಅಲ್ಲಿದ್ದವರ ಸಲಹೆ ಮೇರೆಗೆ ಪೊಲೀಸ್ ದೂರು ದಾಖಲಿಸಿದ್ದು, ತನಿಖೆ ನಡೆಯುತ್ತಿದೆ. ಈ ನಡುವೆ ನೆಲಕ್ಕೆ ಬಿದ್ದಿದ್ದ ಬ್ರೆಸ್ಲೈಟನ್ನು ಮಹಿಳಾ ಭಕ್ತರು ಎತ್ತಿಕೊಂಡಿರುವ ಬಗ್ಗೆ ಮಾಹಿತಿ ಸಿಕ್ಕಿದ್ದರಿಂದ ಅವರು ಮತ್ತೆ ಗೋಕರ್ಣಕ್ಕೆ ಬಂದು ಆ ಭಕ್ತೆಯ ಹುಡುಕಾಟ ನಡೆಸಿದ್ದಾರೆ. ಆದರೆ, ಅವರು ಮಾತ್ರ ಸಿಕ್ಕಿಲ್ಲ.
ಸಾರ್ವಜನಿಕವಾಗಿ ಬೆಲೆ ಬಾಳುವ ಆಭರಣಧರಿಸಿ ಓಡಾಡದಂತೆ ಪೊಲೀಸರು ಪದೇ ಪದೇ ಸೂಚನೆ ನೀಡಿದರೂ ಆ ಸೂಚನೆ ಉಲ್ಲಂಘಿಸಿ ಗೋಕರ್ಣಕ್ಕೆ ಬಂದಿದ್ದ ಭೂಪತಿ ಬ್ರೆಸ್ಲೈಟ್ ಬೀಳಿಸಿಕೊಂಡಿದ್ದರು. ಇದನ್ನು ನೋಡಿದ ಮಹಿಳಾ ಭಕ್ತರೊಬ್ಬರನ್ನು ಅದನ್ನು ತಮ್ಮ ಕೈಚೀಲದೊಳಗೆ ಹಾಕಿಕೊಂಡಿದ್ದಾರೆ. `ತನ್ನ ಆಭರಣ ಕಾಣೆಯಾಗಿದೆ’ ಎಂದು ಭೂಪತಿ ಬೊಬ್ಬೆ ಹೊಡೆಯುವಾಗಲೂ ಅಲ್ಲಿಯೇ ಇದ್ದ ಆ ಮಹಿಳೆ ಚಿನ್ನವನ್ನು ಮಾತ್ರ ಹಿಂತಿರುಗಿಸಿಲ್ಲ. ಈ ಎಲ್ಲಾ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆ ಮಹಿಳೆ ಯಾರು? ಎಲ್ಲಿಯವರು ಎಂದು ಪೊಲೀಸರು ಹುಡುಕಾಟ ನಡೆಸಿದ್ದಾರೆ.