ಶಿರಸಿ: ನಗರದ ಹಲವು ಬಂಗಾರದ ಅಂಗಡಿಗೆ ತೆರಳಿ ಆಭರಣ ಖರೀದಿ ಮಾಡುವುದಾಗಿ ಅಲ್ಪ ಹಣಕ್ಕೆ ಅಪಾರ ಮೌಲ್ಯದ ಚಿನ್ನಾಭರಣ ಪಡೆದು ಪರಾರಿಯಾಗುತ್ತಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಗಾರದ ಜೊತೆ ಅಂಗಡಿಯವರನ್ನು ಪುಸಲಾಯಿಸಿ ಅವರ ಬಳಿಯಿದ್ದ ಹಣವನ್ನು ಆರೋಪಿತರು ಪಡೆದು ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ.
ಹುಸುರಿ ಮರೆಗುಡ್ಡಿಯ ಹರ್ಷವರ್ಧನ ಹರ್ಷಾ ನಾಯ್ಕ ಹಾಗೂ ಸುಗವಿ ಡೊಂಬೆಕೆರೆಯ ಶ್ರೀಕಾಂತ ಈಶ್ವರ ನಾಯ್ಕ ಎಂಬಾತರು ವಿವಿಧ ಬಂಗಾರದ ಅಂಗಡಿಗೆ ತೆರಳಿ ಬಂಗಾರ ಖರೀದಿಸುತ್ತಿದ್ದರು. ಆದರೆ, ಬಂಗಾರದ ನೈಜ ಮೌಲ್ಯವನ್ನು ಅಕ್ಕಸಾಲಿಗರಿಗೆ ನೀಡುತ್ತಿರಲಿಲ್ಲ. 14700ರೂ ಮೌಲ್ಯದ ಉಂಗುರ ಖರೀದಿಸಿದಾಗ 5 ಸಾವಿರ ರೂ ಮಾತ್ರ ನೀಡಿ, ಉಳಿದನ್ನು ನಂತರ ನೀಡುವುದಾಗಿ ನಂಬಿಸಿ ಮೋಸ ಮಾಡುತ್ತಿದ್ದರು. ಇದಲ್ಲದೇ ತುರ್ತಾಗಿ ಹಣ ಅಗತ್ಯವಿರುವ ಬಗ್ಗೆ ತಿಳಿಸಿ ಅಂಗಡಿಕಾರರಿ0ದಲೇ ಕೈಗಡ ಪಡೆದು ಅದನ್ನು ಮರಳಿಸದೇ ವಂಚಿಸುತ್ತಿದ್ದರು.
ಮರಾಠಿಕೊಪ್ಪದ ನಿತ್ಯಾನಂದಮಠ ರಸ್ತೆ ಬಂಗಾರದ ವ್ಯಾಪಾರಿ ರಾಘವೇಂದ್ರ ಸುಧಾಕರ ಶೇಟ್ ಅವರಿಗೂ ಹರ್ಷವರ್ಧನ್ ಇದೇ ರೀತಿ ವಂಚಿಸಿದ್ದು, ಸೆ 25ರಂದು ನಡೆದ ವಂಚನೆಯ ಬಗ್ಗೆ ರಾಘವೇಂದ್ರ ಶೇಟ್ ತಮ್ಮ ಸ್ನೇಹಿತ ಅಕ್ಕಸಾಲಿಗರ ಬಳಿ ಹೇಳಿಕೊಂಡಿದ್ದರು. `ಕೈಗಡ ಪಡೆದ ಹಣವನ್ನು ಆತ ಮರಳಿಸಿಲ್ಲ’ ಎಂದು ಅಳಲು ತೋಡಿಕೊಂಡಿದ್ದರು. `ತಮಗೂ ಆತ ಹೀಗೆ ಮಾಡಿದ್ದಾನೆ’ ಎಂದು ಆ ಅಕ್ಕಸಾಲಿಗರು ಹೇಳಿಕೊಂಡಿದ್ದರು. ಒಟ್ಟು ನಗರದ ಮೂವರಿಗೆ ಹರ್ಷವರ್ಧನ್ ಈ ರೀತಿ ವಂಚಿಸಿರುವುದು ಗೊತ್ತಾಗಿತ್ತು. ಈ ನಡುವೆ ಅಕ್ಟೋಬರ್ 4ರಂದು ಪರಮೇಶ್ವರ ಶೇಟ್ ಎಂಬಾತರನ್ನು ವಂಚಿಸುವದಕ್ಕಾಗಿ ಶ್ರೀಕಾಂತ ನಾಯ್ಕ ಅವರ ಬಂಗಾರದ ಮಳಿಗೆಗೆ ಬಂದಿದ್ದು, ಆಭರಣಗಳನ್ನು ನೋಡಿ ಅದರ ಬೆಲೆ ವಿಚಾರಿಸಿದ ನಂತರ ಹರ್ಷವರ್ಧನ ಕಳುಹಿಸಿರುವುದಾಗಿ ಹೇಳಿದಾಗ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಶ್ರೀಕಾಂತ ನಾಯ್ಕ ಹರ್ಷವರ್ಧನ್’ಗೆ ಫೋನ್ ಮಾಡಿದ್ದು, ಉಡುಗರೆ ನೀಡಲು ತುರ್ತಾಗಿ ಬಂಗಾರದ ಅಗತ್ಯವಿರುವುದಾಗಿ ಆತ ಹೇಳಿದನ್ನು ಅಂಗಡಿಯವರು ಕೇಳಿದ್ದರು. `ತಾನು ರಾಘವೇಂದ್ರ ಶೇಟ್ ಅವರ ಖಾಯಂ ಗಿರಾಕಿ’ ಎಂದು ಅವರ ಹೆಸರನ್ನು ಸಹ ಹರ್ಷವರ್ಧನ್ ದುರುಪಯೋಗಪಡಿಸಿಕೊಳ್ಳುವ ಪ್ರಯತ್ನ ನಡೆಸಿದ್ದರು. ಈ ಹಿನ್ನಲೆ ರಾಘವೇಂದ್ರ ಶೇಟ್ ಅವರು ನೀಡಿದ ದೂರು ದಾಖಲಿಸಿಕೊಂಡ ಪೊಲೀಸರು ವಂಚನೆ ನಡೆಸುತ್ತಿದ್ದ ಹರ್ಷವರ್ಧನ್ ಹಾಗೂ ಆತನಿಗೆ ಸಹಕರಿಸುತ್ತಿದ್ದ ಶ್ರೀಕಾಂತ ನಾಯ್ಕರನ್ನು ವಶಕ್ಕೆ ಪಡೆದರು.
ವಂಚಕ ಬಂಗಾರದ ಅಂಗಡಿಗೆ ಬಂದು ಮಾಡಿದ್ದೇನು? ಅಲ್ಲಿ ನಡೆದಿದ್ದೇನು? ವಿಡಿಯೋ ಇಲ್ಲಿ ನೋಡಿ..