ಶಿರಸಿ: ಹೊಸದಾಗಿ ಖರೀದಿಸಿದ್ದ ಪಲ್ಸರ್ ಬೈಕನ್ನು ಅಡ್ಡಾದಿಡ್ಡಿಯಾಗಿ ಓಡಿಸಿಕೊಂಡು ಬಂದ ಬಾಲಕನಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಬಾಲಕನಿಗೆ ಬೈಕ್ ನೀಡಿದ ಆತನ ಪಾಲಕರಿಗೆ ನ್ಯಾಯಾಧೀಶರು ಭಾರೀ ಪ್ರಮಾಣದ ದಂಡ ವಿಧಿಸಿದ್ದಾರೆ.
ಮೇ 20ರಂದು ಸೊರಬಾದಿಂದ ಶಿವಮೊಗ್ಗಕ್ಕೆ ಅಡ್ಡಾದಿಡ್ಡಿಯಾಗಿ ಬೈಕ್ ಓಡಿಸಿಕೊಂಡು ಬಂದ ಪೋರ ಆಕಸ್ಮಿಕವಾಗಿ ಶಿರಸಿಯ ಐದು ರಸ್ತೆ ಬಳಿ ಪೊಲೀಸರ ಬಳಿ ಸಿಕ್ಕಿಬಿದ್ದಿದ್ದ. ಮಧ್ಯಾಹ್ನ ಊಟದ ಸಮಯವಾಗಿದ್ದರಿಂದ ಪೊಲೀಸರು ಯಾರೂ ಇರಲಿಕ್ಕಿಲ್ಲ ಎಂದೇ ಆತ ಭಾವಿಸಿದ್ದ. ಸಿಕ್ಕಿಬಿದ್ದ ಆತನ ಬಳಿ ಲೈಸನ್ಸು ಇರಲಿಲ್ಲ, ಲೈಸನ್ಸ್ ಪಡೆಯುವ ವಯಸ್ಸು ಆಗಿರಲಿಲ್ಲ. ಆತ ಬೈಕ್ ಮೇಲೆ ಕೂತಾಗ ನೆಲಕ್ಕೆ ಕಾಲು ಮುಟ್ಟುತ್ತಿರಲಿಲ್ಲ.
ಪೊಲೀಸರು ತಕ್ಷಣ ಬೈಕನ್ನು ವಶಕ್ಕೆ ಪಡೆದು ಆತನಿಗೆ ಕಾನೂನು ಪಾಠ ಹೇಳಿದರು. ಅದನ್ನು ತಲೆಗೆ ಹಾಕಿಕೊಳ್ಳದ ಆತ ‘ದೊಡ್ಡವರಿಂದ ಪೋನು ಮಾಡಿಸಿಸುವ ಪ್ರಯತ್ನ ನಡೆಸಿದ್ದ. ಇದಕ್ಕೆ ಬಗ್ಗದ ಪಿಸೈ ನಾಗಪ್ಪ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. `ಇಲ್ಲೇ ಮುಗಿಸಿಕೊಳ್ಳೋಣ ಸರ್’ ಎನ್ನುತ್ತಿದ್ದ ಬೈಕ್ ಮಾಲಕನ ಪ್ರಕರಣವನ್ನು ವಿವರವಾಗಿ ಆಲಿಸಿದ ನ್ಯಾಯಾಧೀಶೆ ಶಾರದಾದೇವಿ ಗರಂ ಬೈಕ್ ಮಾಲಕರಿಗೆ ಚಾಟಿ ಬೀಸಿದರು. ನಂತರ ಬಾಲಕನ ತಂದೆ ಕೇಶವ ರಾಡೇಗಡ’ಗೆ 25 ಸಾವಿರ ರೂ ದಂಡವಿಧಿಸಿ ಎಚ್ಚರಿಕೆ ನೀಡಿದರು.
ಅಪ್ರಾಪ್ತರಿಗೆ ವಾಹನ ಚಾಲನೆಗೆ ಅವಕಾಶ ನೀಡಿರುವುದನ್ನು ಖಂಡಿಸಿದ ನ್ಯಾಯಾಲಯ ಇಂಥ ಪ್ರಕರಣ ಮರುಕಳಿಸಿದಲ್ಲಿ ಪಾಲಕರಿಗೆ ದೊಡ್ಡ ಪ್ರಮಾಣದಲ್ಲಿಯೇ ಶಿಕ್ಷೆ ವಿಧಿಸುವ ಬಗ್ಗೆ ಅಭಿಪ್ರಾಯಪಟ್ಟಿದೆ.
Discussion about this post