ಕುಮಟಾ: ಮೂರು ದಿನದ ಹಿಂದೆ ಬಸ್ ನಿಲ್ದಾಣದ ಬಳಿ ಅಡ್ಡಾದಿಡ್ಡಿ ಬೈಕ್ ಓಡಿಸುತ್ತಿದ್ದ ಬಾಲಕನನ್ನು ಹಿಡಿದು ಪ್ರಕರಣ ದಾಖಲಿಸಿದ ಪೊಲೀಸರು ಬುಧವಾರ ನ್ಯಾಯಾಲಯದ ಆದೇಶದ ಪ್ರಕಾರ ಆತನ ಪಾಲಕರಿಂದ 30 ಸಾವಿರ ರೂ ದಂಡ ವಸೂಲಿ ಮಾಡಿದ್ದಾರೆ.
ಭಾನುವಾರ ಪಟ್ಟಣದಲ್ಲಿ ತಪಾಸಣೆಗೆ ನಿಂತಿದ್ದ ಪಿಸೈ ಮಂಜುನಾಥ ಗೌಡ ಅವರು ವಾಹನ ಸವಾರರಿಗೆ ಜಾಗೃತಿ ಮೂಡಿಸುತ್ತಿದ್ದರು. ವಾಹನ ಓಡಿಸುವಾಗ ಗಮನದಲ್ಲಿರಿಸಿಕೊಳ್ಳಬೇಕಾದ ಸಂಗತಿಗಳ ಕುರಿತು ಅವರು ಅರಿವು ಮೂಡಿಸುತ್ತಿದ್ದರು. ಆಗ, ಅಲ್ಲಿಗೆ ಬೈಕ್ ಓಡಿಸಿಕೊಂಡು ಬಂದ ವ್ಯಕ್ತಿಯನ್ನು ನಿಲ್ಲಿಸಿ, ವಿಚಾರಿಸಿದಾಗ ಆತನ ಬಳಿ ಬೈಕ್ ಓಡಿಸಲು ಪರವಾನಿಗೆ ಇರಲಿಲ್ಲ. ಆತನ ವಯಸ್ಸು ಪರಿಶೀಲಿಸಿದಾಗ 18 ವರ್ಷಕ್ಕಿಂತ ಕಡಿಮೆ ಆಗಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದರು. ಬಾಲಕ ಹಾಗೂ ಆತನಿಗೆ ಬೈಕ್ ನೀಡಿದ ಪಾಲಕರ ಕುರಿತು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದು, ಬಾಲಕನಿಗೆ ಬೈಕ್ ನೀಡಿದ ಆತನ ತಾಯಿ ನೆಲ್ಲಿಕೇರಿಯ ಪ್ರೇಮಲತಾ ನಾಯ್ಕ ಅವರಿಗೆ ನ್ಯಾಯಾಲಯ 30 ಸಾವಿರ ರೂ ದಂಡ ವಿಧಿಸಿದೆ. ಕಳೆದ ವಾರ ಶಿರಸಿ ನ್ಯಾಯಾಲಯ ಸಹ ಬಾಲಕನಿಗೆ ಬೈಕ್ ಓಡಿಸಲು ನೀಡಿದ ಪಾಲಕನಿಗೆ 25 ಸಾವಿರ ರೂ ದಂಡ ವಿಧಿಸಿತ್ತು.
Discussion about this post