ಯಲ್ಲಾಪುರ: ಅಟ್ಟದ ಮೇಲೆ ಒಣಗಿಸಿದ್ದ ಅಡಿಕೆ ನೋಡಲು ತೆರಳುತ್ತಿದ್ದ ಬೀರಗದ್ದೆಯ ಬೀರ ಗೌಡ ಕಾಲು ಜಾರಿ ನೆಲಕ್ಕೆ ಬಿದ್ದು ಸಾವನಪ್ಪಿದ್ದಾರೆ.
ಯಲ್ಲಾಪುರ ತಾಲೂಕಿನ ಅರಬೈಲ್ ಬಳಿಯ ಬೀರಗದ್ದೆಯ ಬೀರ ಗುಬ್ಬ ಗೌಡ (63) ಮನೆ ಬಳಿಯ ಅಡಿಕೆ ಅಟ್ಟದ ಮೇಲೆ ಅಡಿಕೆ ಒಣಗಿಸಿದ್ದರು. ಸೋಮವಾರ ಮಧ್ಯಾಹ್ನ 3.30ರ ವೇಳೆಗೆ ಅಡಿಕೆ ನೋಡುವುದಕ್ಕಾಗಿ ಅವರು ಏಣಿ ಹತ್ತಿದ್ದರು. ಏಣಿಯಿಂದ ಕಾಲು ಜಾರಿ ಬಿದ್ದ ಅವರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡರು.
ಬೀರ ಗೌಡ ಅವರು ನೆಲಕ್ಕೆ ಬಿದ್ದಿರುವುದನ್ನು ನೋಡಿದ ಅವರ ಮಗ ವೀರೇಂದ್ರ ಗೌಡ ತಕ್ಷಣ ಸರ್ಕಾರಿ ಆಸ್ಪತ್ರೆಗೆ ಅವರನ್ನು ಕರೆತಂದರು. ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು `ಹೆಚ್ಚಿನ ಚಿಕಿತ್ಸೆ ಅಗತ್ಯ’ ಎಂದರು. ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಕರೆದೊಯ್ಯುವ ವೇಳೆ ಕಿರವತ್ತಿ ಬಳಿ ಬೀರ ಗೌಡ ಕೊನೆ ಉಸಿರೆಳೆದರು.
ಪ್ರಸ್ತುತ ಅವರ ಶವವನ್ನು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಮರಣೋತ್ತರ ಪರೀಕ್ಷೆ ಮುಗಿದು ನಂತರ ಕುಟುಂಬದವರಿಗೆ ಶವ ಬಿಟ್ಟುಕೊಡಲಾಗುತ್ತದೆ. ಪೊಲೀಸ್ ಪ್ರಕರಣ ದಾಖಲಾಗಿದೆ.