ಹಾಸ್ಟೇಲ್ ಮಕ್ಕಳ ಬಿಸಿಯೂಟಕ್ಕೆ ಬಳಸಬೇಕಿದ್ದ ಸಾಮಗ್ರಿಗಳನ್ನು ಕದ್ದು ಮಾರಾಟ ಮಾಡಿ ಆ ಹಣದಿಂದ ಬಿರಿಯಾನಿ ಪಾರ್ಟಿ ಮಾಡಿದ್ದ ಸಿಬ್ಬಂದಿಯನ್ನು ಕೆಲಸದಿಂದ ಬಿಡುಗಡೆ ಮಾಡಲಾಗಿದೆ.
ಮುಂಡಗೋಡ ಕರಗಿನಕೊಪ್ಪದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆಹಾರ ಸಾಮಗ್ರಿಗಳು ಪದೇ ಪದೇ ಕಳ್ಳತನವಾಗುತ್ತಿದ್ದವು. ದಾಖಲೆ ಪರಿಶೀಲನೆ ನಡೆಸಿದಾಗಲೂ ಒಂದಕ್ಕೊoದು ತಾಳೆ ಆಗುತ್ತಿರಲಿಲ್ಲ. ವಿದ್ಯಾರ್ಥಿಗಳ ಆಹಾರ ವಸ್ತು ನಾಪತ್ತೆ ಬಗ್ಗೆ ವಸತಿ ಶಾಲೆಯ ಪ್ರಾಚಾರ್ಯ ಮಂಜುನಾಥ ಮರಿತಮ್ಮಣ್ಣವರ್ ಸಾಕಷ್ಟು ತಲೆಕೆಡಿಸಿಕೊಂಡಿದ್ದರು.
ಈ ಹಿನ್ನಲೆ ಅವರು ರಾತ್ರಿ ವೇಳೆ ಕಾರ್ಯಾಚರಣೆಗಿಳಿದರು. ಭಾನುವಾರ ರಾತ್ರಿ ಐದು ಅಡುಗೆ ಸಿಬ್ಬಂದಿ ಅವರ ಬಳಿ ಸಿಕ್ಕಿ ಬಿದ್ದರು. ಇಬ್ಬರು ಭದ್ರತಾ ಸಿಬ್ಬಂದಿ ಸಹ ಆಹಾರ ಸಾಮಗ್ರಿ ಕದಿಯುತ್ತಿದ್ದರು. ಒಟ್ಟು ಏಳು ಸಿಬ್ಬಂದಿ ಸೇರಿ ಮಕ್ಕಳ ಆಹಾರ ಕದ್ದು ಮಾರಾಟ ಮಾಡುವುದನ್ನು ಕಾಯಕ ಮಾಡಿಕೊಂಡಿದ್ದರು. ಆಹಾರ ಸಾಮಗ್ರಿ ಮಾರಾಟದಿಂದ ಸಿಕ್ಕ ಹಣದಲ್ಲಿ ಬಿರಿಯಾನಿ ಪಾರ್ಟಿಯನ್ನು ಮಾಡಿದ್ದರು. ಉಳಿದ ಹಣವನ್ನು ಸಮನಾಗಿ ಹಂಚಿಕೊoಡಿದ್ದರು.
ಭಾನುವಾರ ರಾತ್ರಿ ಅಕ್ಕಿ, ಈರುಳ್ಳಿ, ಒಣಕೊಬ್ಬರಿ, ಬೇಳೆ, ಎಣ್ಣೆ, ಪ್ಯಾಕೇಜ್ ಮತ್ತಿತರ ವಸ್ತುಗಳನ್ನು ಚೀಲದಲ್ಲಿ ತುಂಬಿ ಕದ್ದು ಸಾಗಿಸುತ್ತಿದ್ದಾಗ ಈ ಏಳು ಜನ ಸಿಕ್ಕಿ ಬಿದ್ದರು. ಆ ಎಲ್ಲಾ ಆಹಾರ ಸಾಮಗ್ರಿಗಳನ್ನು ಹೊತ್ತೊಯ್ಯುತ್ತಿದ್ದವ ಕಳ್ಳರನ್ನು ಪ್ರಾಚಾರ್ಯ ಮಂಜುನಾಥ ಮರಿತಮ್ಮಣ್ಣನವರ್ ದಾಖಲೆಗಳ ಜೊತೆ ಹಿಡಿದರು. ನಂತರ ಅವರಿಗೆಲ್ಲರಿಗೂ ನೋಟಿಸ್ ನೀಡಿ, ಮೇಲಧಿಕಾರಿಗಳಿಗೂ ವರದಿ ಸಲ್ಲಿಸಿದರು.
ನೋಟಿಸ್’ಗೆ ಸರಿಯಾಗಿ ಉತ್ತರ ದೊರೆಯದಿರುವುದು ಹಾಗೂ ಕಳ್ಳತನದ ಆರೋಪ ಸಾಭೀತಾಗಿರುವ ಹಿನ್ನಲೆ ಆ ಏಳು ಸಿಬ್ಬಂದಿಯನ್ನು ಕೆಲಸದಿಂದ ಬಿಡುಗಡೆ ಮಾಡಲಾಯಿತು.