ಯಲ್ಲಾಪುರ: `ಚುನಾವಣೆಯಲ್ಲಿ ಸೋಲು-ಗೆಲುವು ಸಹಜ. ಗಣಪತಿಗಲ್ಲಿ ಚುನಾವಣೆಯಲ್ಲಿ ಮತದಾರರು ನೀಡಿದ ಆದೇಶವನ್ನು ಗೌರವಿಸುತ್ತೇವೆ’ ಎಂದು ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಹೇಳಿದ್ದಾರೆ.
`ಚುನಾವಣಾ ಪ್ರಚಾರದ ಅವಧಿಯಲ್ಲಿ ಪಟ್ಟಣ ಪಂಚಾಯತದ ಸಾಕಷ್ಟು ಅವ್ಯವಸ್ಥೆಗಳು ನಮ್ಮ ಗಮನಕ್ಕೆ ಬಂದಿದೆ. ಮುಖ್ಯವಾಗಿ ಕುಡಿಯುವ ನೀರು ಕಲುಷಿತವಾಗಿರುವುದು, ಸ್ವಚ್ಛತೆ ಇಲ್ಲದಿರುವುದು, ಜನರ ಸಮಸ್ಯೆಗಳಿಗೆ ಪಟ್ಟಣ ಪಂಚಾಯತದಿAದ ಸ್ಪಂದನೆ ಸಿಗದಿರುವುದು ಸಾಮಾನ್ಯವಾಗಿದೆ. ಪಟ್ಟಣ ಪಂಚಾಯತವೂ ಆಡಳಿತ ಸಮಸ್ಯೆಗಳನ್ನು ಬಗೆಹರಿಸಲು ವಿಫಲವಾಗಿದ್ದು, ಪಟ್ಟಣ ಪಂಚಾಯತ ಸದಸ್ಯರು ಮುಂದಾಗಬೇಕು’ ಎಂದವರು ಆಗ್ರಹಿಸಿದ್ದಾರೆ.
`ಬಿಜೆಪಿ ಚಿಹ್ನೆಯ ಅಡಿ ಆಯ್ಕೆಯಾದ ಶಾಸಕ ಶಿವರಾಮ ಹೆಬ್ಬಾರ್ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲಿಸಿ ಅವರನ್ನು ಗೆಲ್ಲಿಸಿದ್ದಾರೆ. ಅವರ ಜೊತೆ ಬಿಜೆಪಿ ಬೆಂಬಲಿಸಿದ ಎಲ್ಲರಿಗೂ ಕೃತಜ್ಞರಾಗಿದ್ದೇವೆ’ ಎಂದು ಹೇಳಿದ್ದಾರೆ. `ಪ್ರತಿ ಬೂತ್ ಮಟ್ಟದಲ್ಲಿ ಬಿಜೆಪಿ ಸಂಘಟನೆ ನಡೆಯುತ್ತಿದೆ. ಮುಂದಿನ ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ಸಿದ್ಧತೆ ನಡೆದಿದೆ. ಸ್ಪಂದನೆ ಮೂಲಕ ಜನರ ಮನಸ್ಸು ಗೆಲ್ಲುವ ಪ್ರಯತ್ನ ನಿರಂತರವಾಗಿದೆ’ ಎಂದು ಪ್ರಸಾದ ಹೆಗಡೆ ಹೇಳಿದ್ದಾರೆ.