ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್’ನ್ನು ಬಹುತೇಕ ಬಿಜೆಪಿಗರು ವಿರೋಧಿಸಿದ್ದಾರೆ. ಆದರೆ, ಬಿಜೆಪಿ ಮುಖಂಡರಾದ ಯಲ್ಲಾಪುರದ ರಾಮು ನಾಯ್ಕ ಅವರು `ಈ ಬಜೆಟ್ ಜನಪರ’ ಎಂದು ಹೇಳಿದ್ದಾರೆ.
`ಸಿದ್ದರಾಮಯ್ಯ ಈ ಬಾರಿ ಉತ್ತಮ ಜನಪರ ಬಜೆಟ್ ಮಂಡಿಸಿದ್ದಾರೆ. ಅನೇಕ ವರ್ಷಗಳ ಚರ್ಚೆ ಹಾಗೂ ಬೇಡಿಕೆಯಲ್ಲಿದ್ದ ವಿಷಯಗಳ ಬಗ್ಗೆಯೂ ಗಮನಹರಿಸಿದ್ದಾರೆ. ಅತಿಥಿ ಶಿಕ್ಷಕರ, ಅಂಗನವಾಡಿ ಕಾರ್ಯಕರ್ತರ, ಬಿಸಿಯೂಟ ಸಿಬ್ಬಂದಿ ಜೊತೆ ದೇವಸ್ಥಾನ ಅರ್ಚಕರ ಮಾಸಿಕ ಗೌರವಧನ ಏರಿಕೆ ಸ್ವಾಗತಾರ್ಹ’ ಎಂದು ರಾಮು ನಾಯ್ಕ ಹೇಳಿದ್ದಾರೆ.
`100 ಸರಕಾರಿ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳಾಗಿಸುವುದು ಹಾಗೂ 50 ಪ್ರೌಢಶಾಲೆಗಳನ್ನು ಜೂನಿಯರ್ ಕಾಲೇಜುಗಳನ್ನಾಗಿ ಉನ್ನತಿಕರಿಸುವುದು ಉತ್ತಮ ಯೋಜನೆ. ಇದರಿಂದ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಇನ್ನೂ ಕಾಡುಪ್ರಾಣಿಗಳಿಂದ ತುತ್ತಾದವರಿಗೆ ನೀಡುವ ಪರಿಹಾರ ಧನವನ್ನು 20 ಲಕ್ಷಕ್ಕೆ ಏರಿಸಿರುವುದು ಒಳ್ಳೆಯ ಬೆಳವಣಿಗೆ’ ಎಂದು ರಾಮು ನಾಯ್ಕ ವಿವರಿಸಿದ್ದಾರೆ.
`ಮಾನ್ಯತೆ ಪಡೆದ ಪತ್ರಕರ್ತರಿಗೆ 5 ಲಕ್ಷ ರೂವರೆಗೆ ನಗದು ರಹಿತ ಚಿಕಿತ್ಸೆ, ಮಾಸಾಶನ ಮೊತ್ತ ಏರಿಕೆ, ಪ ಜಾತಿ ಹಾಗೂ ಪ ಪಂಗಡದ ಮೀನುಗಾರರಿಗೆ ವಾಹನ ಖರೀದಿ ಅನುದಾನ, ಬುಡಕಟ್ಟು ಸಮುದಾಯದ ಮೂಲಭೂತ ಸೌಕರ್ಯಗಳ ಅಭಿವೃಧ್ದಿಗೆ 200 ಕೋಟಿ ರೂ ಮಂಜೂರು ಘೋಷಣೆಗಳು ಆಶಾದಾಯಕವಾಗಿದೆ’ ಎಂದವರು ವಿಶ್ಲೇಷಿಸಿದ್ದಾರೆ.
`ಸುರಕ್ಷಿತ ಹೆರಿಗೆ ಖಚಿತಪಡಿಸಲು ಪ್ರತಿ ತಾಲೂಕಿನ ವೈದ್ಯಕೀಯ ಕೇಂದ್ರದಲ್ಲಿ ಎಂಸಿಎಚ್ ತಜ್ಞರ ನಿಯೋಜನೆ, ಮಹಿಳೆಯರಿಂದಲೇ ನಿರ್ವಹಿಸುವ 50 ಶಿಶುಪಾಲನಾ ಕೇಂದ್ರಗಳಿಗೆ ಅನುಮತಿ. ಸ್ಲಂ ಪ್ರದೇಶದಲ್ಲಿ ನಿರ್ಮಿಸುವ ಮಾನ್ಯತೆ ಪಡೆದ ಮನೆಗಳಿಗೆ ಅನುದಾನ ಹೆಚ್ಚಳ, ಆಯಷ್ಮಾನ ಭಾರತ ಯೋಜನೆಯಲ್ಲಿ ಸುಧಾರಣೆ, ಹೃದ್ರೋಗ, ಕ್ಯಾನ್ಸರ್ ರೋಗಿಗಳ ವೆಚ್ಚದ ಮರುಪಾವತಿ, ಕಾರ್ಮಿಕ ಬಂಧುಗಳ ವೈದ್ಯಕೀಯ ಸೌಲಭ್ಯಗಳ ವಿಸ್ತರಣೆ, ಕೆಲಸದ ಸ್ಥಳದಲ್ಲಿ ಮರಣಪಟ್ಟರೆ ನೀಡುವ ಪರಿಹಾರ ಮೊತ್ತ 8 ಲಕ್ಷ ರೂಪಾಯಿಗೆ ಏರಿಕೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸೊದ್ಯಮಕ್ಕೆ ಉತ್ತೇಜನ, ಚಂದ್ರಗುತ್ತಿಯಲ್ಲಿ ಪ್ರವಾಸೋಧ್ಯಮ ಅಭಿವೃದ್ಧಿ ತಾಣದ ನಿರ್ಮಾಣ, ರಾಜ್ಯದ ಪ್ರಥಮ ಸುಸ್ತಿರ ಸಾವಯವ ತಾಲೂಕಾಗಿ ಜೋಯಡಾ ಆಯ್ಕೆಯಿಂದ ಜಿಲ್ಲೆಯ ಅಭಿವೃದ್ಧಿಗೆ ನೆರವಾಗಲಿದೆ’ ಎಂದವರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
`ಸಿದ್ದರಾಮಯ್ಯ ಅವರು ನುಡಿದಂತೆ ನಡೆಯಬೇಕು. ಅವರು ಬಜೆಟ್’ನಲ್ಲಿ ನೀಡಿದ ಎಲ್ಲಾ ಘೋಷಣೆಗಳನ್ನು ಈಡೇರಿಸಬೇಕು’ ಎಂದು ರಾಮು ನಾಯ್ಕ ಅವರು ಆಗ್ರಹಿಸಿದ್ದಾರೆ.