ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳಿಗೆ ಹೋಲಿಸಿದರೆ ಪ್ರಸ್ತುತ ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಿದೆ. ತಳಮಟ್ಟದಲ್ಲಿ ಕಾರ್ಯಕರ್ತರನ್ನು ಸಂಪರ್ಕಿಸಿ ಅವರ ಆಗುಹೋಗುಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಬಿಜೆಪಿ ಪ್ರಯತ್ನಿಸುತ್ತಿದೆ. ಕಾರವಾರ ಹಾಗೂ ಯಲ್ಲಾಪುರ ವಿಧಾನಸಭಾ ವ್ಯಾಪ್ತಿಯಲ್ಲಿ ಬಿಜೆಪಿ ಪಕ್ಷ ಸಂಘಟನೆಗೆ ಹೆಚ್ಚಿಗೆ ಶ್ರಮಿಸುತ್ತಿದೆ.
ಕಾರವಾರದಲ್ಲಿ ಮಾಜಿ ಶಾಸಕಿ ರೂಪಾಲಿ ನಾಯ್ಕ ನೇತೃತ್ವದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ನಡೆಯುತ್ತಿದ್ದು, ಯಲ್ಲಾಪುರದಲ್ಲಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ತುರುಸಿನಿಂದ ಗ್ರಾಮೀಣ ಭಾಗದಲ್ಲಿ ಓಡಾಡುತ್ತಿದ್ದಾರೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸಹ ಜಿಲ್ಲೆಯ ವಿವಿಧ ಭಾಗಗಳಿಗೆ ಸಂಚರಿಸಿ ಬಿಜೆಪಿ ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ. ಕುಮಟಾದಲ್ಲಿ ಶಾಸಕ ದಿನಕರ ಶೆಟ್ಟಿ ಜೆಡಿಎಸ್ ನಾಯಕ ಸೂರಜ ನಾಯ್ಕ ಸೋನಿ ಅವರ ಜೊತೆಗೂಡಿ ಅಡ್ಡಾಡುತ್ತಿದ್ದಾರೆ. ಆ ಭಾಗದಲ್ಲಿ ಸಹ ಬಿಜೆಪಿ ಸದಸ್ಯತ್ವ ನೊಂದಣಿ ತುರುಸಿನಿಂದ ಕೂಡಿದೆ.
ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್ ಬೆಂಬಲಿದ ಶಾಸಕ ಮಂಕಾಳು ವೈದ್ಯ ಉಸ್ತುವಾರಿ ಸಚಿವರು ಆಗಿದ್ದರಿಂದ ಅವರ ಪ್ರಭಾವ ಹೆಚ್ಚಿಗೆ ನಡೆಯುತ್ತಿದೆ. ಹಳಿಯಾಳದಲ್ಲಿ ಬಿಜೆಪಿಯಲ್ಲಿನ ಒಡಕು ಪಕ್ಷ ಸಂಘಟನೆಗೆ ತೊಡಕಾಗಿದೆ. ಅಲ್ಲಿ `ಎದುರಾಳಿ ಕಾಂಗ್ರೆಸ್ಸಿನವರನ್ನಾದರೂ ಮನವೊಲೈಸಬಹುದು, ಬಿಜೆಪಿಯಲ್ಲಿರುವವರನ್ನು ಸಮಾದಾನ ಮಾಡಲು ಸಾಧ್ಯವಿಲ್ಲ’ ಎಂಬ ಪರಿಸ್ಥಿತಿಯಲ್ಲಿ ಜಿಲ್ಲಾ ನಾಯಕರಿದ್ದಾರೆ.
ಶಿರಸಿ ವಿಧಾನಸಭಾ ಕ್ಷೇತ್ರದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಕರೆಯ ಮೇರೆಗೆ ಕಾರ್ಯಕರ್ತರು ಮನೆ ಮನೆ ಭೇಟಿ ನಡೆಸಿದ್ದಾರೆ.