ಶಾಸಕ ಶಿವರಾಮ ಹೆಬ್ಬಾರ್ ನೈತಿಕತೆ ಪ್ರಶ್ನಿಸಿದ ಯಲ್ಲಾಪುರ ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಅವರಿಗೆ ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್ ಕೆ ಭಟ್ ಮೆಣಸುಪಾಲ್ ತಿರುಗೇಟು ನೀಡಿದ್ದಾರೆ. ಪ್ರಸಾದ ಹೆಗಡೆ ಅವರ ತಂದೆ ಪ್ರಮೋದ ಹೆಗಡೆ ಅವರು ಕಾಂಗ್ರೆಸ್ ಸರ್ಕಾರದ ಅಧಿಕಾರ ಅನುಭವಿಸುತ್ತಿರುವ ಬಗ್ಗೆ ಅವರು ನೆನಪಿಸಿದ್ದಾರೆ!
ಪ್ರಮೋದ ಹೆಗಡೆ ಅವರು ರಾಜ್ಯ ವಿಕೇಂದ್ರಿಕರಣ ಯೋಜನೆಯ ಉಪಾಧ್ಯಕ್ಷರಾಗಿದ್ದಾರೆ. ಅವರು `ಕರ್ನಾಟಕ ಸರ್ಕಾರ’ ಎಂಬ ನಾಮಫಲಕಹೊಂದಿದ ವಾಹನ ಬಳಸುತ್ತಿದ್ದು, ಸರ್ಕಾರದಿಂದ ಪ್ರಯಾಣ ಭತ್ಯೆ ಸೇರಿ ವಿವಿಧ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. `ನೈತಿಕತೆ ಇದ್ದವರು ಅದನ್ನು ಮೊದಲು ಬಿಡಬೇಕು’ ಎಂದು ಎನ್ ಕೆ ಭಟ್ ಮೆಣಸುಪಾಲ್ ಹೇಳಿದ್ದಾರೆ.
`ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿರುವಾಗ `ಕರ್ನಾಟಕ ಸರ್ಕಾರ’ ಎಂಬ ಬೋರ್ಡಿನ ಕಾರಿನಲ್ಲಿ ಸಂಚರಿಸುವ ಪ್ರಮೋದ ಹೆಗಡೆ ಬಿಜೆಪಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಹೀಗಿರುವಾಗ ಪ್ರಸಾದ ಹೆಗಡೆ ಅವರು ಯಾವ ನೈತಿಕತೆ ಉಳಿಸಿಕೊಂಡು ಶಿವರಾಮ ಹೆಬ್ಬಾರ್ ಅವರ ಕುರಿತು ಮಾತನಾಡುತ್ತಿದ್ದಾರೆ?’ ಎಂಬುದು ಎನ್ ಕೆ ಭಟ್ ಮೆಣಸುಪಾಲ್ ಅವರ ಪ್ರಶ್ನೆ.
`ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯದ ಅಡಿ ಬಜೆಟ್ ಮಂಡಿಸಿದ್ದಾರೆ. ಅದನ್ನು ಶಾಸಕ ಶಿವರಾಮ ಹೆಬ್ಬಾರ್ ಸ್ವಾಗತಿಸಿದ್ದಾರೆ. ಒಳ್ಳೆಯ ಕೆಲಸ ಮಾಡಿದಾಗ ಸ್ವಾಗತಿಸುವುದು ಶಿವರಾಮ ಹೆಬ್ಬಾರ್ ಅವರ ಗುಣವಾಗಿದ್ದು, ಅನೇಕ ಬಿಜೆಪಿಗರು ಇದನ್ನು ಜನಪರ ಬಜೆಟ್ ಎಂದು ಹೇಳಿದ್ದಾರೆ. ರಾಜಕೀಯ ಕಾರಣಕ್ಕಾಗಿ ಪ್ರಸಾದ ಹೆಗಡೆ ಅವರು ಶಿವರಾಮ ಹೆಬ್ಬಾರ್ ಅವರ ನೈತಿಕತೆ ಪ್ರಶ್ನಿಸುವುದು ಸರಿಯಲ್ಲ’ ಎಂದು ಎನ್ ಕೆ ಭಟ್ಟ ಮೆಣಸುಪಾಲ್ ಹೇಳಿದ್ದಾರೆ.
`ಪ್ರಸಾದ ಹೆಗಡೆ ಕಾಂಗ್ರೆಸ್ ಬಗ್ಗೆ ಮಾತನಾಡುವ ಮೊದಲು ಅವರ ತಂದೆ ಪ್ರಮೋದ ಹೆಗಡೆ ರಾಜ್ಯ ವಿಕೇಂದ್ರಿಕರಣ ಯೋಜನೆಯ ಹುದ್ದೆಗೆ ರಾಜೀನಾಮೆ ಕೊಡಬೇಕು. ಆ ನಂತರ ಅವರು ಬೇರೆಯವರ ರಾಜೀನಾಮೆ ಕೇಳುವ ಅರ್ಹತೆ ಪಡೆಯುತ್ತಾರೆ’ ಎಂದು ಹೇಳಿದ್ದಾರೆ.