`ಪಂಚ ಗ್ಯಾರಂಟಿ ಯೋಜನೆ ಮೂಲಕ ಅಧಿಕಾರ ಹಿಡಿದ ಕಾಂಗ್ರೆಸ್ ಸರ್ಕಾರ ಬಿ ಆರ್ ಅಂಬೇಡ್ಕರ್ ಅವರ ಆಶಯಗಳನ್ನು ಗಾಳಿಗೆ ತೂರಿದೆ’ ಎಂದು ಬಿಜೆಪಿ ಆರೋಪಿಸಿದೆ. ದಲಿತರಿಗೆ ಆದ ಅನ್ಯಾಯದ ವಿರುದ್ಧ ಶನಿವಾರ ಕಾರವಾರದಲ್ಲಿ ಪ್ರತಿಭಟಿಸಿದ ಬಿಜೆಪಿಗರು ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ದೂರು ನೀಡಿದ್ದಾರೆ!
`ದಲಿತರಿಗೆ ಮೀಸಲಿಟ್ಟ ಹಣವನ್ನು ಕಾಂಗ್ರೆಸ್ ಸರ್ಕಾರ ಅನ್ಯ ಉದ್ದೇಶಕ್ಕೆ ಬಳಸಿದೆ’ ಎಂಬುದು ಪ್ರತಿಭಟನಾಕಾರರ ಮೂಲ ಆರೋಪ. `ದಲಿತರ ಪರ ಎಂದು ಬಿಂಬಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈಗ ದಲಿತರ ಹಣವನ್ನು ದುರ್ಬಳಕೆ ಮಾಡಿಕೊಂಡಿದೆ. ಬಿಟ್ಟಿ ಭಾಗ್ಯಗಳನ್ನು ನಿರ್ವಹಿಸಲಾಗದೇ ಆರ್ಥಿಕ ಶಿಸ್ತು ಹಾಳು ಮಾಡಿದೆ. ರೈತರು, ಪರಿಶಿಷ್ಟರು, ಹಿಂದುಳಿದವರು ಹಾಗೂ ದಲಿತರ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಸರ್ಕಾರ ವಿಫಲವಾಗಿದೆ’ ಎಂದು ಬಿಜೆಪಿಗರು ಪ್ರತಿಭಟಿಸಿದರು.
`ಚುನಾವಣಾ ಸಮಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೋಸದ ಮಾತುಗಳನ್ನಾಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು. ನಂತರ ಆದ ಅನ್ಯಾಯದ ವಿರುದ್ಧ ಬಿಜೆಪಿ ಧ್ವನಿಯಾಗುತ್ತಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಹಣವನ್ನು ನುಂಗಿರುವ ಕಾಂಗ್ರೆಸ್ ಸರಕಾರದ ದ್ರೋಹದ ರಾಜಕಾರಣವನ್ನು ಎಲ್ಲರೂ ಒಕ್ಕೊರಲಿನಿಂದ ಖಂಡಿಸಬೇಕು’ ಎಂದು ಪ್ರತಿಭಟನಾಕಾರರು ಹೇಳಿದರು.
ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ನ್ಯಾಯ ಸಿಗುವವರೆಗೂ ಹೋರಾಟ ನಿರಂತರ ಎಂದು ಘೋಷಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಎನ್ ಎಸ್ ಹೆಗಡೆ, ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ, ಮಾಜಿ ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾ ಪ್ರಮುಖರಾದ ಗೋವಿಂದ ನಾಯ್ಕ, ವೆಂಕಟೇಶ ನಾಯ್ಕ, ಹರಿಪ್ರಕಾಶ ಕೊಣೆಮನೆ, ರಾಜೇಂದ್ರ ನಾಯ್ಕ, ಗುರುಪ್ರಸಾದ ಹೆಗಡೆ, ಪ್ರಶಾಂತ ನಾಯ್ಕ, ಅಶೋಕ ಛಲವಾದಿ, ಸಂಜಯ ಸಾಳುಂಕೆ, ಕಿಶನ್ ಕಾಂಬ್ಳೆ, ರವಿರಾಜ ಅಂಕೋಲೆಕರ, ಗೋಪಾಲಕೃಷ್ಣ ವೈದ್ಯ, ನಾಗೇಶ ಕುರ್ಡೇಕರ, ಸುಭಾಷ ಗುನಗಿ, ಅರವಿಂದ ಗುನಗಿ ಸೇರಿ ನೂರಾರು ಜನ ಪ್ರತಿಭಟನೆಯಲ್ಲಿದ್ದರು.