ಯಲ್ಲಾಪುರ: ಹಲಸ್ಕಂಡ ಕ್ರಾಸಿನ ಬಳಿ ಮೂತ್ರ ವಿಸರ್ಜನೆಗೆ ನಿಂತಿದ್ದ ಕಟ್ಟಿಗೆ ವ್ಯಾಪಾರಿ ಅಕ್ತರ್ ಗಂಗೊಳ್ಳಿ ಅವರ ಮುಖಕ್ಕೆ ಖಾರದಪುಡಿ ಎರಜಿ ದರೋಡೆ ನಡೆಸಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಶಿರಸಿಯ ಬನವಾಸಿ ರಸ್ತೆ ಕುರ್ಸೆ ಕಪೌಂಡ್ ಬಳಿಯ ಅಕ್ತರ್ ಗಂಗೋಳ್ಳಿ ನ 19ರಂದು ಯಲ್ಲಾಪುರಕ್ಕೆ ಆಗಮಿಸಿದ್ದರು. ಕಿರವತ್ತಿಗೆ ಹೋದ ಅವರು ಅಲ್ಲಿನ ಮರಮಟ್ಟು ಸಂಗ್ರಹಾಲಯದಲ್ಲಿನ ನಾಟಾಗಳನ್ನು ಪರಿಶೀಲಿಸಿದ್ದರು. ಅದಾದ ನಂತರ ಸಂಜೆ ಯಲ್ಲಾಪುರ – ಶಿರಸಿ ಮಾರ್ಗವಾಗಿ ತಮ್ಮ ಊರಿಗೆ ಸ್ಕೂಟರಿನಲ್ಲಿ ಹೊರಟಿದ್ದರು. ಈ ವೇಳೆ ಮೂತ್ರ ವಿಸರ್ಜನೆಗಾಗಿ ಅವರು ಹಲಸ್ಕಂಡ ಕ್ರಾಸಿನ ಬಳಿ ನಿಂತಾಗ ಎರಡು ಸ್ಕೂಟರ್ ಮೂಲಕ ಬಂದ ಐದು ಜನ `ಈ ರಸ್ತೆ ಎಲ್ಲಿ ಹೋಗುತ್ತದೆ?’ ಎಂದು ಪ್ರಶ್ನಿಸಿದ್ದರು. ಈ ವೇಳೆ ಅದರಲ್ಲಿದ್ದ ಒಬ್ಬ ಅಕ್ತರ್ ಅವರ ಮುಖಕ್ಕೆ ಖಾರದಪುಡಿ ಎರಚಿದ್ದು, ಉಳಿದವರೆಲ್ಲರೂ ಸೇರಿ ಕಿಸೆಯಲ್ಲಿದ್ದ 50 ಸಾವಿರ ರೂ ಹಣ ಎಗರಿಸಿದ್ದರು.
ಅಕ್ತರ್ ಅವರು ಬೊಬ್ಬೆ ಹೊಡೆಯುವುದನ್ನು ನೋಡಿದ ದುಷ್ಕರ್ಮಿಗಳು ಅವರ ಬಳಿಯಿದ್ದ ಸ್ಕೂಟಿಯನ್ನು ಅಪಹರಿಸಿಕೊಂಡು ಅಲ್ಲಿಂದ ಪರಾರಿಯಾದರು. ಈ ಬಗ್ಗೆ ನ 19ರಂದು ಅಕ್ತರ್ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ನ 20ರ ರಾತ್ರಿಯೇ ಐವರು ಕಿರಾತಕರನ್ನು ಪೊಲೀಸರು ಪತ್ತೆ ಮಾಡಿದರು.
ಖಚಿತ ಮಾಹಿತಿ ಆಧರಿಸಿ ಪಿಐ ರಮೇಶ ಹಾನಾಪುರ ಅವರು ನೂತನನಗರ ಜಡ್ಡಿಯ ಮೀರ್ ಆದಂ (20 ವರ್ಷ), ಕಾಳಮ್ಮನಗರದ ರವಿ ಸಿದ್ದಿ (29 ವರ್ಷ), ಮಹಮದ್ ರಿಜ್ವಾನ್ (22) ಜಹಿರುದ್ಧೀನ್ (28 ವರ್ಷ) ದೆಹಳ್ಳಿಯ ನಾಗೇಂದ್ರ ಸಿದ್ದಿ (34 ವರ್ಷ) ಎಂಬಾತರನ್ನು ವಶಕ್ಕೆ ಪಡೆದರು. ಪಿಎಸ್ಐ ಸಿದ್ದಪ್ಪ ಗುಡಿ ಅವರೆಲ್ಲರನ್ನು ವಿಚಾರಣೆ ನಡೆಸಿದರು. ಪೊಲೀಸ್ ಸಿಬ್ಬಂದಿ ಮಹಮದ್ ಶಫೀ, ಉಮೇಶ ತಂಬರಗಿ, ರಾಘವೇಂದ್ರ ಮೂಳೆ, ಗಿರೀಶ ಲಮಾಣಿ, ಪರಶುರಾಮ ಕಾಳೆ, ನಂಧೀಶ್ವರ, ಕರ್ಣ ಕುಮಾರ, ಶೋಭಾ ನಾಯ್ಕ, ಶಿಲ್ಪಾ ಗೌಡ ಸೇರಿ ದುಷ್ಕರ್ಮಿಗಳು ಬಚ್ಚಿಟ್ಟಿದ್ದ 25 ಸಾವಿರ ರೂ ಹಣ ಹಾಗೂ ಸ್ಕೂಟರ್ಗಳನ್ನು ಪತ್ತೆ ಮಾಡಿದರು. ಉಳಿದ 25 ಸಾವರ ರೂಪಾಯಿಯನ್ನು ಐವರು ಸೇರಿ ಖರ್ಚು ಮಾಡಿದ್ದರು.
ಅಕ್ತರ್ ಅವರ ಸ್ಕೂಟರ್ ಜೊತೆ ಅಪರಾಧ ಕೃತ್ಯಕ್ಕೆ ಬಳಸಿದ ಇನ್ನೆರಡು ಸ್ಕೂಟರ್, ಐದು ಮೊಬೈಲ್’ನ್ನು ಪೊಲೀಸರು ಈ ವೇಳೆ ವಶಕ್ಕೆ ಪಡೆದು, ಐದು ಆರೋಪಿತರನ್ನು ನ್ಯಾಯಾಲಯಕ್ಕೆ ಒಪ್ಪಿಸಿದರು.
ಒಂಟಿಯಾಗಿ ಸಂಚರಿಸುವಾಗ ಜಾಗೃತರಾಗಿರಿ. ಅನ್ಯಾಯಕ್ಕೆ ಒಳಗಾದರೆ ಪೊಲೀಸ್ ದೂರು ನೀಡಲು ಮರೆಯದಿರಿ!