ನೂರಾರು ದೋಣಿಗಳ ಮೂಲಕ ಆಳ ಸಮುದ್ರಕ್ಕೆ ತೆರಳಿದ ಮೀನುಗಾರರು ಅಂಕೋಲಾ ಅರಬ್ಬಿ ಸಮುದ್ರದ ನಡುವೆ ಬೋಟುಗಳ ತಾಲೀಮು ನಡೆಸಿ, ವಾಣಿಜ್ಯ ಬಂದರು ನಿರ್ಮಾಣ ಕಾರ್ಯಕ್ಕೆ ವಿರೋಧವ್ಯಕ್ತಪಡಿಸಿದರು. ಕಡಲತೀರದಲ್ಲಿಯೂ ಮಾನವ ಸರಪಳಿ ರಚಿಸಿ ಯೋಜನೆ ವಿರುದ್ಧ ಧಿಕ್ಕಾರ ಕೂಗಿದರು
ಅಂಕೋಲಾದ ಕೇಣಿಯಲ್ಲಿ ಸರ್ಕಾರ ವಾಣಿಜ್ಯ ಬಂದರು ನಿರ್ಮಾಣಕ್ಕೆ ಉದ್ದೇಶಿಸಿದೆ. ಇದಕ್ಕೆ ಅಲ್ಲಿನ ಮೀನುಗಾರರು ಮೊದಲಿನಿಂದಲು ವಿರೋಧಿಸುತ್ತ ಬಂದಿದ್ದಾರೆ. ಅದಾಗಿಯೂ ಬಂದರು ನಿರ್ಮಾಣ ಕಾರ್ಯ ಸ್ಥಗಿತವಾಗಿಲ್ಲ. ಖಾಸಗಿ ಕಂಪನಿಗೆ ಬಂದರು ನಿರ್ಮಾಣದ ಗುತ್ತಿಗೆ ನೀಡಲಾಗಿದ್ದು, ಅವರ ಕಾರ್ಯಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳಲು ಸರ್ಕಾರ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದೆ. ಹೀಗಾಗಿ ಜಿಲ್ಲಾಡಳಿತ ಬಂದರು ಸರ್ವೇ ಕಾರ್ಯಕ್ಕೆ ಆಗುವ ತೊಂದರೆ ತಡೆಯಲು ಕೇಣಿ ಹಾಗೂ ಸುತ್ತಲಿನ ಕೆಲ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದೆ.
ಹೀಗಾಗಿ ಮೀನುಗಾರರಿಕೆ ಕೇಣಿಯಲ್ಲಿ ಪ್ರತಿಭಟನೆ ನಡೆಸಲು ಅವಕಾಶ ನೀಡಿಲ್ಲ. ಅದಾಗಿಯೂ, `ಮೀನುಗಾರರು ಪ್ರತಿಭಟಿಸುವುದು ನಮ್ಮ ಹಕ್ಕು’ ಎಂದು ಪಟ್ಟುಹಿಡಿದ ಕಾರಣ ಅವರಿಗೆ ಬೇಲಿಕೇರಿಯಲ್ಲಿ ಶಾಂತಿಯುತ ಹೋರಾಟ ನಡೆಸಲು ಪೊಲೀಸರು ಅನುಮತಿ ನೀಡಿದ್ದರು. ಸಮುದ್ರದಾಳದಲ್ಲಿ ಸರ್ವೇ ನಡೆಯುವ 500ಮೀಟರ್ ಪ್ರದೇಶದಲ್ಲಿಯೂ ನಿಷೇಧಾಜ್ಞೆ ಜಾರಿಗೊಳಸಿಲಾಗಿರುವುದರಿಂದ ಸಮುದ್ರಕ್ಕಿಳಿದು ಪ್ರತಿಭಟನೆ ನಡೆಸದಂತೆ ಎಚ್ಚರಿಕೆಯನ್ನು ನೀಡಿದ್ದರು. ಅದಾಗಿಯೂ, ಮೀನುಗಾರರು ಆಳ ಸಮುದ್ರಕ್ಕೆ ದೋಣಿ ಮೂಲಕ ತೆರಳಿ ಪ್ರತಿಭಟನೆಯ ಸಂದೇಶ ರವಾನಿಸಿದರು.
ಬಂದರು ಸರ್ವೇ ನಡೆಸುವ ಕ್ಷೇತ್ರವನ್ನು ಬೋಟುಗಳಿಂದ ಸುತ್ತುವರೆದ ಮೀನುಗಾರರು ಸರ್ವೇ ನಡೆಸಲು ಆಗಮಿಸಿದವರಿಗೆ ಧಿಕ್ಕಾರ ಕೂಗಿದರು. ಕಡಲತೀರದಲ್ಲಿಯೂ ನೂರಾರು ಮಹಿಳೆಯರು ಜಮಾಯಿಸಿ ತಮ್ಮ ಆಕ್ರೋಶವ್ಯಕ್ತಪಡಿಸಿದರು. ಮಾನವ ಸರಪಳಿ ರಚಿಸಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. `ಬಂದರು ಯೋಜನೆ ಸ್ಥಗಿತಗೊಳಿಸದೇ ಇದ್ದರೆ ರಾಜ್ಯದ ಎಲ್ಲಡೆ ಪ್ರತಿಭಟನೆ ನಡೆಸುವುದು ಅನಿವಾರ್ಯ’ ಎಂದು ಎಚ್ಚರಿಸಿದರು.
`ನಾವು ಅಭಿವೃದ್ಧಿ ವಿರೋಧಿ ಅಲ್ಲ. ಆದರೆ, ಪರಿಸರ ನಾಶವಾಗಲು ಬಿಡುವುದಿಲ್ಲ’ ಎಂದು ಮೀನುಗಾರ ಮಹಿಳೆಯರು ಬ್ಯಾನರ್ ಪ್ರದರ್ಶಿಸಿದರು. `ತೊಲಗಿಸಿ ತೊಲಗಿಸಿ.. ವಾಣಿಜ್ಯ ಬಂದರು ತೊಲಗಿಸಿ’ ಎಂಬ ಘೋಷಣೆಗಳನ್ನು ಅಲ್ಲಿದ್ದವರು ಮೊಳಗಿಸಿದರು. ಕುಮಟಾದಿಂದ ಆಗಮಿಸಿದ ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ ಪ್ರತಿಭಟನಾಕಾರರ ಮನವೊಲೈಸುವ ಪ್ರಯತ್ನ ನಡೆಸಿದರು. ಕೊನೆಗೆ ತಮ್ಮ ಅಹವಾಲುಗಳನ್ನು ಉಪವಿಭಾಗಾಧಿಕಾರಿಗಳ ಮೂಲಕವೇ ಪ್ರತಿಭಟನಾಕಾರರು ಮುಖ್ಯಮಂತ್ರಿಗಳಿಗೆ ರವಾನಿಸಿದರು. ಬೇರೆ ಬೇರೆ ಭಾಗದ ಮೀನುಗಾರರು ಸಹ ಅಂಕೋಲಾಗೆ ಆಗಮಿಸಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.