ಭೂ ಪರಿವರ್ತನೆಯಾಗಿ ಕಟ್ಟಡ ನಿರ್ಮಾಣದ ನಂತರವೂ ಮನೆ ಸಂಖ್ಯೆ ನೀಡಲು 15 ಸಾವಿರ ರೂ ಲಂಚ ಬೇಡಿದ್ದ ಶಿರಸಿ ಜಾನ್ಮನೆ ಪಿಡಿಓ ಕೃಷ್ಣಪ್ಪ ಯಲವಲಗಿ ಅವರಿಗೆ 4 ವರ್ಷ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶಿಸಿದೆ. ಜೊತೆಗೆ 5 ಸಾವಿರ ರೂ ದಂಡವನ್ನು ಪಾವತಿಸುವಂತೆ ಸೂಚಿಸಿದೆ.
ಕೃಷ್ಣಪ್ಪ ಯಲವಲಗಿ ಮುಂಡಗೋಡು ತಾಲೂಕಿನವರು. 2010ರಲ್ಲಿ ಅವರು ಶಿರಸಿ ಜಾನ್ಮನೆ ಗ್ರಾ ಪಂ ಪಿಡಿಓ ಆಗಿದ್ದರು. ಬೆಂಗಳೂರಿನಲ್ಲಿ ವಾಸವಾಗಿರುವ ಸುಕ್ರಿಮನೆಯ ಸುಧೀಂದ್ರ ಹೆಗಡೆ ಅವರಿಂದ ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು.
ಸುಧೀಂದ್ರ ಹೆಗಡೆ ಅವರು 14 ಗುಂಟೆ ಜಾಗ ಖರೀದಿಸಿ ಅದನ್ನು ಎನ್‌ಎ ಮಾಡಿದ್ದರು. ಅದಾದ ನಂತರ ಅಲ್ಲಿ ಮನೆ ಕಟ್ಟಿದ್ದರು. ಆದರೆ, ಮನೆ ಸಂಖ್ಯೆಗೆ ಸಲ್ಲಿಸಿದ ಅರ್ಜಿಯನ್ನು ಪಿಡಿಓ ಅನಗತ್ಯವಾಗ ತಿರಸ್ಕರಿಸಿದ್ದರು.
`ಈ ಕೆಲಸ ಸಾಕಷ್ಟು ಕಿರಿಕಿರಿ. ಫೀ ಬಿಟ್ಟು 15 ಸಾವಿರ ಕೊಟ್ಟರೆ ಮಾಡಿಕೊಡುವೆ’ ಎಂದು ಕೃಷ್ಣಪ್ಪ ಯಲವಲಗಿ ಕೈ ಒಡ್ಡಿದ್ದರು. ಜೊತೆಗೆ `ಮೇಲಧಿಕಾರಿಗಳಿಗೂ ಹಣ ಕೊಡಬೇಕು’ ಎಂದಿದ್ದರು. ಈ ಲಂಚದ ಹಣ ಸ್ವೀಕರಿಸುವ ವೇಳೆ ಲೋಕಾಯುಕ್ತರು ದಾಳಿ ನಡೆಸಿ, ಕೃಷ್ಣಪ್ಪ ಅವರನ್ನು ಬಂಧಿಸಿದ್ದರು. ಪ್ರಕರಣ ವಿಚಾರಣೆ ನಡೆಸಿದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಡಿ ಎಸ್ ವಿಜಯಕುಮಾರ ಅವರು ಶಿಕ್ಷೆ ಪ್ರಕಟಿಸಿದ್ದಾರೆ.
ಅವಳಿ ಮಕ್ಕಳ ಸಮಾನ ಸಾಧನೆ!
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಎರಡು ಅಂಕ ವ್ಯತ್ಯಾಸದಲ್ಲಿದ್ದ ರಕ್ಷಾ ಹೆಗಡೆ ಹಾಗೂ ದಕ್ಷ ಹೆಗಡೆ ಪಿಯುಸಿಯಲ್ಲಿ ಸಮಾನ ಅಂಕಪಡೆದು ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.
ರಕ್ಷಾ ಹೆಗಡೆ ಹಾಗೂ ದಕ್ಷಾ ಹೆಗಡೆ ಅವಳಿ ಮಕ್ಕಳು. ಈ ಇಬ್ಬರು ವಿದ್ಯಾರ್ಥಿಗಳು ಬೆಂಗಳೂರಿನ ದೀಕ್ಷಾ ಕಾಲೇಜಿನ ವಿದ್ಯಾರ್ಥಿಗಳು. ಮಕ್ಕಳ ತಜ್ಞ ಡಾ ದಿನೇಶ ಹೆಗಡೆ ಹಾಗೂ ರೋಗಶಾಸ್ತ ಸಲಹೆಗಾರ್ತಿ ಡಾ ಸುಮನ್ ಹೆಗಡೆ ಅವರ ಪಾಲಕರು. ದಕ್ಷ ಹೆಗಡೆ ಅವರು ನಾಲ್ಕು ವಿಷಯದಲ್ಲಿ 100 ಅಂಕ ಪಡೆದಿದ್ದಾರೆ. ರಕ್ಷಾ ಹೆಗಡೆ ಎರಡು ವಿಷದಲ್ಲಿ 100 ಅಂಕ ಪಡೆದಿದ್ದಾರೆ. ಒಟ್ಟಾರೆ 600 ಅಂಕದಲ್ಲಿ ಈ ಇಬ್ಬರು ಮಕ್ಕಳು 594 ಅಂಕಪಡೆದು ಶೇ 99ರ ಸಾಧನೆ ಮಾಡಿದ್ದಾರೆ.
ಹೆಗಡೆರ ಮನೆಯಲ್ಲಿ ಇಸ್ಪಿಟ್ ಆಟ: 13 ಜನರಿಗೆ ಜೈಲೂಟ!
ಶಿರಸಿ ಕೆಳಗಿನ ಇಟಗುಳಿಯಲ್ಲಿ ಇಸ್ಪಿಟ್ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. 13 ಜನ ಸಿಕ್ಕಿ ಬಿದ್ದಿದ್ದು, ಅವರೆಲ್ಲರನ್ನು ಪೊಲೀಸರು ಬಂಧಿಸಿದ್ದಾರೆ.
ಕೆಳಗಿನ ಇಟಗುಳಿಯ ರಾಮಚಂದ್ರ ಹೆಗಡೆ ಅವರು ಏಪ್ರಿಲ್ 8ರಂದು ಇಸ್ಪಿಟ್ ಆಟಕ್ಕಾಗಿ ತಮ್ಮ ಸ್ನೇಹಿತರನ್ನು ಮನೆಗೆ ಆಮಂತ್ರಿಸಿದ್ದರು. ಮೇಲಿನ ಇಟಗುಳಿಯ ಕೃಷಿಕ ಮಂಜುನಾಥ ಹೆಗಡೆ, ಶಿರಸಿ ಓಣಿಕೇರಿಯ ಎಲ್‌ಐಸಿ ಎಜೆಂಟ್ ಕೇಶವ ಹೆಗಡೆ, ನೀರ್ನಳ್ಳಿಯ ಮಂಜುನಾಥ ಹೆಗಡೆ, ಕೊಪ್ಪದ ಮಹೇಶ ಹೆಗಡೆ ಅಲ್ಲಿಗೆ ಆಗಮಿಸಿದ್ದರು.
ನೀರ್ನಳ್ಳಿಯ ನಾರಾಯಣ ಹೆಗಡೆ, ಮೇಲಿನ ಇಟಗುಳಿಯ ವಿನಯ ಹೆಗಡೆ, ಮುಂಡಗೇಸರ ಬೆಳ್ಳಿಕೇರಿಯ ಕಮಲಾಕರ ಭಟ್ಟ, ಕೆಳಗಿನ ಇಟಗುಳಿಯ ಆನಂದ ಹೆಗಡೆ ಸಹ ಅವರ ಜೊತೆಯಾದರು. ಇಟಗುಳಿ ಅಂದಲಿಯ ಮಂಜುನಾಥ ಹೆಗಡೆ, ಮೇಲಿನ ಇಟಗುಳಿಯ ಗಣಪತಿ ಹೆಗಡೆ, ಕೊಪ್ಪದ ಬಲೇಶ್ವರ ಹೆಗಡೆ ಹಾಗೂ ಮೇಲಿನ ಇಟಗುಳಿಯ ಗಣಪತಿ ಹೆಗಡೆ ಸಹ ಆಗಮಿಸಿ ಇಸ್ಪಿಟ್ ಆಟ ಶುರು ಮಾಡಿದ್ದರು.
ಈ ವೇಳೆ ಶಿರಸಿ ಗ್ರಾಮೀಣ ಠಾಣಾ ಪಿಎಸ್‌ಐ ಸಂತೋಷಕುಮಾರ್ ಅದೇ ಭಾಗದಲ್ಲಿ ಗಸ್ತು ತಿರುಗುತ್ತಿದ್ದರು. `ಕೆಳಗಿನ ಇಟಗುಳಿಯ ರಾಮಚಂದ್ರ ಹೆಗಡೆ ಅವರ ಮನೆಯಲ್ಲಿ ರಾಮಚಂದ್ರ ಹೆಗಡೆ ಅವರು ಹಣ ಹೂಡಿ ಇಸ್ಪಿಟ್ ಆಡಿಸುತ್ತಿದ್ದಾರೆ’ ಎಂದು ಪೊಲೀಸರಿಗೆ ಅಲ್ಲಿನವರೊಬ್ಬರು ವಿಷಯ ಮುಟ್ಟಿಸಿದರು. ತಕ್ಷಣ ಪಿಎಸ್‌ಐ ಸಂತೋಷಕುಮಾರ್ ತಮ್ಮ ಸಿಬ್ಬಂದಿ ಜೊತೆ ಹೆಗಡೆ ಮನೆ ಬಾಗಿಲು ತಟ್ಟಿದರು.
ಇಸ್ಪಿಟ್ ಆಡುತ್ತಿದ್ದ 13 ಜನ ಅಲ್ಲಿಯೇ ಸಿಕ್ಕಿಬಿದ್ದರು. ಎಲ್ಲರನ್ನು ವಶಕ್ಕೆ ಪಡೆದು ಹರಡಿಕೊಂಡಿದ್ದ 54900ರೂ ಹಣವನ್ನು ಜಪ್ತು ಮಾಡಿದರು. 7 ಮೊಬೈಲ್ ಸಹ ಅಲ್ಲಿ ಸಿಕ್ಕಿದವು. ಕಾನೂನುಬಾಹಿರ ಆಟವಾಡಿದ ಕಾರಣ ಆ ಎಲ್ಲರ ವಿರುದ್ಧ ಪ್ರಕರಣ ದಾಖಲಿಸಿದರು.
ದಟ್ಟ ಅರಣ್ಯದಲ್ಲಿಯೂ ಜೂಜಾಟ
ಹೊನ್ನಾವರದ ಮಂಕಿ ಬಳಿಯ ಹೆರೆಮಕ್ಕಿ ಅರಣ್ಯ ಪ್ರದೇಶದಲ್ಲಿ ಜೂಜಾಡುತ್ತಿದ್ದ ಐದು ಜನ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.
ಹೆರಮಕ್ಕಿಯ ಮಂಜುನಾಥ ಗೌಡ, ಗುಡೆಮಕ್ಕಿಯ ನರಸಿಂಹ ನಾಯ್ಕ, ಗುಡೆಮಕ್ಕಿಯ ಬೆಮ್ಮಯ್ಯ ನಾಯ್ಕ, ಆಡುಕುಳ ನೀಲಗಿರಿಯ ಗೋವಿಂದ ನಾಯ್ಕ, ಗುಡೆಮಕ್ಕಿಯ ಧರ್ಮ ನಾಯ್ಕ ಸಿಕ್ಕಿ ಬಿದ್ದವರು. ಏಪ್ರಿಲ್ 7ರ ರಾತ್ರಿ ಅವರೆಲ್ಲರೂ ಇಸ್ಪಿಟ್ ಆಡುತ್ತಿದ್ದಾಗ ಮಂಕಿ ಪೊಲೀಸ್ ಠಾಣೆಯ ಪಿಎಸ್‌ಐ ಭರತಕುಮಾರ್ ದಾಳಿ ಮಾಡಿದರು. ಅವರ ಬಳಿಯಿದ್ದ 4620ರೂ ಹಣ ಹಾಗೂ ಇಸ್ಪಿಟ್ ಎಲೆಗಳನ್ನು ವಶಕ್ಕೆಪಡೆದು ಪ್ರಕರಣ ದಾಖಲಿಸಿದರು.
ಅಜ್ಜಿ ಬಂಗಾರ ಪೊಲೀಸರ ಬಳಿ ಜೋಪಾನ!
ವೃದ್ಧೆಯ ಬಂಗಾರ ಕದ್ದು ಪರಾರಿಯಾಗುತ್ತಿದ್ದ ಕಳ್ಳರಿಬ್ಬರನ್ನು ಬನವಾಸಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿoದ 22 ಗ್ರಾಂ ಮಾಂಗಲ್ಯ ಸರದ ಜೊತೆ ಕಾರೊಂದನ್ನು ವಶಕ್ಕೆ ಪಡೆದಿದ್ದಾರೆ.
ಶಿವಮೊಗ್ಗ ಗಾಡಿಕೊಪ್ಪದ ಚೇತನ ಪರಶುರಾಮ ಗಾಯಕವಾಡ (30) ಹಾಗೂ ಅದೇ ಊರಿನ ಜಿ ಎಸ್ ಕೆ ಎಮ್ ರಸ್ತೆಯ ಅರ್ಜುನ ಶ್ರೀರಾಮ ಶಿಂದೆ ಬಂಗಾರ ಕದ್ದು ಪರಾರಿಯಾಗುತ್ತಿದ್ದರು. ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರಿಗೆ ವಿಷಯ ಮುಟ್ಟಿಸಿದ ಶಿರಸಿ ಡಿವೈಎಸ್‌ಪಿ ಗಣೇಶ ಕೆ ಎಲ್ ಕಳ್ಳರ ಬಂಧನಕ್ಕೆ ತಂಡ ರಚಿಸಿದರು.
ಸಿಪಿಐ ಶಶಿಕಾಂತ ವರ್ಮಾ ಕಾರ್ಯಾಚರಣೆ ಮುಂದಾಳತ್ವವಹಿಸಿದ್ದು, ಪಿಎಸ್‌ಐ ಚಂದ್ರಕಲಾ ಪತ್ತಾರ್, ಸುನಿಲಕುಮಾರ ಬಿ ವೈ, ಪೊಲೀಸ್ ಸಿಬ್ಬಂದಿ ಚಂದ್ರಪ್ಪ ಕೊರವರ್, ಪ್ರಶಾಂತ ಪಾವಸ್ಕರ, ಬಸವರಾಜ ಜಾಡರ್, ಮಂಜುನಾಥ ನಡುವಿನಮನಿ, ಮಂಜಪ್ಪ ಪಿ, ಮಾದೇವ ನಿರೊಳಿ, ರಾಘು ಸಾಲಗಾವಿ ಹಾಗೂ ಉದಯ ಗುನಗಾ ಕಾರನ್ನು ಬೆನ್ನಟ್ಟಿದರು. ಕೊನೆಗೂ ಬನವಾಸಿ ಪೊಲೀಸರು ಅವರ ಕಾರನ್ನು ಅಡ್ಡಗಟ್ಟಿ ಬಂಗಾರದ ಸರವನ್ನು ವಶಕ್ಕೆ ಪಡೆದರು.
ಮಾಧ್ಯಮದವರ ಮುಂದೆ ಮಾಜಿ ಸೈನಿಕನ ಅಳಲು!
ಕಾರವಾರದ ಅರ್ಜುನಕೋಟದ ಮಾಜಿ ಸೈನಿಕ ರೋಹಿದಾಸ ಕಾಂಬ್ಳೆ ಅವರು ಇದೀಗ ಸಮಸ್ಯೆ ಸಿಲುಕಿದ್ದಾರೆ. ಪಂಚಾಯತದಿoದ ಅನುಮತಿಪಡೆದು ಅಂಗಡಿ ನಡೆಸುತ್ತಿದ್ದರೂ ಅವರಿಗೆ ಕೆಲವರು ಸಮಸ್ಯೆ ಮಾಡುತ್ತಿದ್ದಾರೆ.
ಈ ಬಗ್ಗೆ ಅವರು ಮಾಧ್ಯಮದವರ ಮುಂದೆ ಅಳಲು ತೋಡಿಕೊಂಡಿದ್ದಾರೆ. `ದುರುದ್ದೇಶದಿಂದ ನನಗೆ ಕೆಲವರು ತೊಂದರೆ ಮಾಡುತ್ತಿದ್ದಾರೆ’ ಎಂದವರು ದೂರಿದ್ದಾರೆ. `ಭಾರತೀಯ ಸೈನ್ಯದಿಂದ ನಿವೃತ್ತಿಯಾದ ಬಳಿಕ ಜೀವನೋಪಾಯಕ್ಕೆ ತಾಲೂಕಿನ ಸದಾಶಿವಗಡದ ದೇಸಾಯಿವಾಡದ ಪಿಡಬ್ಲುಡಿ ಮೇನ್ ರೋಡಿನಲ್ಲಿ ಚಿಕ್ಕದಾಗಿ ಅಂಗಡಿ ಹಾಕಿಕೊಂಡಿದ್ದೇನೆ. ಇದಕ್ಕೆ ಸ್ಥಳೀಯ ಗ್ರಾಪಂನಿAದ ಅನುಮತಿ ಪಡೆಯಲಾಗಿದೆ. ಈಚೆಗೆ ಕೆಲವರು ತಮಗೆ ಅಂಗಡಿ ನಡೆಸಲು ಬಿಡುತ್ತಿಲ್ಲ. ಕಳೆದ ತಿಂಗಳು ಅಂಗಡಿಯ ಗೋಡೆಗೆ, ಸಿಮೆಂಟ್ ಶೀಟಿಗೆ ಹಾನಿ ಮಾಡಿದ್ದಾರೆ’ ಎಂದವರು ನೋವು ತೋಡಿಕೊಂಡರು.
`ಕಿಡಿಗೇಡಿಗಳು ಅಂಗಡಿ ಎದುರಿನ ಗಟಾರವನ್ನು ಮುಚ್ಚಿದ್ದಾರೆ. ಮಳೆಗಾಲದಲ್ಲಿ ನೀರೆಲ್ಲ ಅಂಗಡಿಗೆ ನುಗ್ಗುತ್ತಿದೆ. ಈ ಬಗ್ಗೆ ಈಗಾಗಲೇ ಪೊಲೀಸ್ ದೂರು ನೀಡಲಾಗಿದೆ. ಉದ್ದೇಶ ಪೂರ್ವಕವಾಗಿ ತೊಂದರೆ ನೀಡುತ್ತಿರುವವರು ಅಂಗಡಿಯನ್ನೂ ಬಂದ್ ಮಾಡಿದರೆ ಜೀವನೋಪಾಯಕ್ಕೆ ದಾರಿಯಿಲ್ಲ’ ಎಂದು ತಮ್ಮ ಸಮಸ್ಯೆ ವಿವರಿಸಿದರು.