ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಸ್ಥಾನ ತಪ್ಪಿಸಿಕೊಂಡಿರುವ ಆರ್ ವಿ ದೇಶಪಾಂಡೆ ಇದೀಗ ತಮ್ಮ ಬೆಂಬಲಿಗರಿಗೆ ನಿಗಮ ಮಂಡಳಿ ಸ್ಥಾನ ಕೊಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ರಾಜ್ಯ ಆಡಳಿತದಲ್ಲಿ ಆರ್ ವಿ ದೇಶಪಾಂಡೆ ಅವರ ಪ್ರಭಾವ ಕೆಲಸ ಮಾಡಿದರೆ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಈ ಹುದ್ದೆ ದೊರೆಯುವುದರಲ್ಲಿ ಯಾವುದೇ ಅನುಮಾನವಿಲ್ಲ!
ವಿವಿಧ ಶಾಸಕರು ಹಾಗೂ ಕಾಂಗ್ರೆಸ್ ಪದಾಧಿಕಾರಿಗಳು ನಿಗಮ ಮಂಡಳಿ ಹುದ್ದೆಗಳ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ, ಲಾಭಿ ಮಾಡುವವರ ಬದಲು ಪಕ್ಷಕ್ಕಾಗಿ ದುಡಿದ ನೈಜ ಕಾರ್ಯಕರ್ತರಿಗೆ ಈ ಹುದ್ದೆ ದೊರೆಯಬೇಕು ಎಂಬುದು ಆರ್ ವಿ ದೇಶಪಾಂಡೆ ಅವರ ಒತ್ತಾಸೆ. ಈಗಾಗಲೇ ನಿಗಮ ನೇಮಕಗಳ ಕುರಿತು ಗೃಹ ಸಚಿವ ಜಿ ಪರಮೇಶ್ವರ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ. `ಉತ್ತರ ಕನ್ನಡ ಜಿಲ್ಲೆಯ ಕಾರ್ಯಕರ್ತರಿಗೆ ಹೆಚ್ಚಿನ ಅವಕಾಶ ಸಿಗಬೇಕು’ ಎಂದು ಆರ್ ವಿ ದೇಶಪಾಂಡೆ ಒತ್ತಡ ಹಾಕುತ್ತಿದ್ದಾರೆ. ತಮ್ಮ ಬೇಡಿಕೆ ಈಡೇರಲಿದೆ ಎಂಬ ವಿಶ್ವಾಸ ಸಹ ಅವರಿಗಿದೆ. `ಎಲ್ಲಾ ಕಾರ್ಯಕರ್ತರಿಗೂ ಅವಕಾಶ ಮಾಡಿಕೊಡಲು ಸಾಧ್ಯವಿಲ್ಲ. ಸದ್ಯ ಎಷ್ಟು ಜನರಿಗೆ ಅವಕಾಶ ಸಿಗಲಿದೆ ಎಂದು ಸಹ ಹೇಳಲು ಆಗುವುದಿಲ್ಲ. ಆದರೂ ಸಾಮಾಜಿಕ ನ್ಯಾಯ ಕೊಡಿಸುವ ಪ್ರಯತ್ನ ಮಾಡುವೆ’ ಎಂದು ಆರ್ ವಿ ದೇಶಪಾಂಡೆ ಹೇಳಿದ್ದಾರೆ.
`ನಾನು ಯಾರಿಗೂ ತಾರತಮ್ಯ ಆಗಲು ಬಿಡುವುದಿಲ್ಲ. ನಿಗಮ ನೇಮಕದಲ್ಲಿ ಅನ್ಯಾಯ ಆದರೆ ಆ ಬಗ್ಗೆ ಮುಖ್ಯಮಂತ್ರಿಗಳ ಗಮನಸೆಳೆಯುವ ಹೊಣೆ ಮಾಧ್ಯಮಗಳದ್ದು’ ಎಂದು ಆರ್ ವಿ ದೇಶಪಾಂಡೆ ಹೇಳಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿನ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ನಿಗಮ ಮಂಡಳಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅವಕಾಶ ಮಾಡಿಸಿಕೊಡುವ ಪ್ರಯತ್ನ ಮಾಡಿರುವುದಾಗಿ ಅವರು ಹೇಳಿಕೊಂಡಿದ್ದಾರೆ. `ಪ್ರತಿ ಕ್ಷೇತ್ರದಲ್ಲಿಯೂ ಕಾರ್ಯಕರ್ತರಿಗೆ ಅಧಿಕಾರ ಸಿಗಲಿದೆ’ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಬಿಜೆಪಿ ಮಾದರಿ
ಏನೂ ಇಲ್ಲದ ಶಾಂತಾರಾಮ ಸಿದ್ದಿ ಅವರನ್ನು ಬಿಜೆಪಿ ವಿಧಾನ ಪರಿಷತ್ ಸದಸ್ಯರನ್ನಾಗಿ ಮಡಿದೆ. ಪಕ್ಷ ಹಾಗೂ ಸಂಘಟನೆಗಾಗಿ ದುಡಿದವರನ್ನು ಬಿಜೆಪಿ ಗುರುತಿಸಿದೆ. ಆದರೆ, ಕಾಂಗ್ರೆಸ್ ಈವರೆಗೂ ಅಂಥ ಕೆಲಸ ಮಾಡಿಲ್ಲ. ಹೀಗಾಗಿ ಈ ಸಲವಾದರೂ ಬಡ ಕಾರ್ಯಕರ್ತರ ಕೈಗೆ ಅಧಿಕಾರ ಸಿಗಬೇಕು ಎಂಬುದು ಆರ್ ವಿ ದೇಶಪಾಂಡೆ ಅವರ ನಿಲುವು.