ಅಡುಗೆ, ಔಷಧ ಬಳಕೆಯ ಜೊತೆ ವಿದೇಶದಲ್ಲಿಯೂ ಬೇಡಿಕೆಯಿರುವ ಕಾಳು ಮೆಣಸಿಗೆ ಬಂಪರ್ ಬೆಲೆ ಬಂದಿದೆ. ಕೃಷಿ ಮಾರುಕಟ್ಟೆಯಲ್ಲಿ ಇದೀಗ ಕಾಳು ಮೆಣಸಿನ ಅಭಾವ ಎದುರಾಗಿದೆ. ಹೀಗಾಗಿ ಬೋಳು ಕಾಳು ಕ್ವಿಂಟಲಿಗೆ ಲಕ್ಷ ರೂ ಮೇಲ್ಪಟ್ಟು ಮಾರಾಟವಾಗಿದೆ!
ಕಳೆದ ಆರು ತಿಂಗಳಿನಿ0ದ ಕಾಳು ಮೆಣಸಿನ ದರ ಏರಿಕೆಯಾಗುತ್ತಿದ್ದು, ಒಮ್ಮೆ ಇಳಿಕೆ ಕಂಡಿತ್ತು. ಅದಾದ ನಂತರ ಹಂತ ಹಂತವಾಗಿ ಮಾರುಕಟ್ಟೆ ಚೇತರಿಸಿಕೊಳ್ಳಲಾರಂಭಿಸಿತು. ಪ್ರಸ್ತುತ ಕಪ್ಪು ಬಣ್ಣದ ಕಾಳು ಮೆಣಸು 65 ಸಾವಿರದ ಆಸುಪಾಸಿನಲ್ಲಿ ಮಾರಾಟವಾಗಿದೆ. ಶನಿವಾರ ಶಿರಸಿ ಟಿಎಸ್ಎಸ್ ಮಾರುಕಟ್ಟೆಯಲ್ಲಿ ಬಿಳಿ ಕಾಳು ಮೆಣಸು 105176ರೂ ದರದಲ್ಲಿ ಮಾರಾಟವಾಗಿದೆ. ಶುಕ್ರವಾರ 106099ರೂ ಕ್ವಿಂಟಾಲ್ ದರದಲ್ಲಿ ಬಿಳಿ ಕಾಳು ಮೆಣಸಿನ ಟೆಂಡರ್ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಜನ ಅಡಿಕೆ ಜೊತೆ ಕಾಳು ಮೆಣಸನ್ನು ಸಹ ಬೆಳೆಯುತ್ತಾರೆ. ಅಡಿಕೆ ಮರಕ್ಕೆ ಕಾಳು ಮೆಣಸು ಹಬ್ಬಿಸಿ ಉಪಆದಾಯ ಪಡೆಯುವವರ ಸಂಖ್ಯೆ ಹೆಚ್ಚಿದೆ. ಶಿರಸಿ, ಸಿದ್ದಾಪುರ ಹಾಗೂ ಯಲ್ಲಾಪುರ ಭಾಗದಲ್ಲಿ ಹೆಚ್ಚಿನ ಪ್ರಮಾಣದ ಕಾಳು ಮೆಣಸು ಬೆಳೆಗಾರರಿದ್ದಾರೆ. ಕಪ್ಪು ಕಾಳು ಮೆಣಸಿಗಿಂತಲೂ ಬಿಳಿ ಕಾಳು ಮೆಣಸಿಗೆ ಮೊದಲಿನಿಂತಲೂ ದರ ವ್ಯತ್ಯಾಸವಿದ್ದು, ಮೊದಲೆಲ್ಲ 10 ಸಾವಿರದ ಆಸುಪಾಸು ವ್ಯತ್ಯಾಸವಿತ್ತು. ಆದರೆ, ಈ ಬಾರಿ ಕಪ್ಪು ಹಾಗೂ ಬಿಳಿ ಕಾಳು ಮೆಣಸಿನ ನಡುವೆ ಕ್ವಿಂಟಲ್’ಗೆ 40 ಸಾವಿರ ರೂ ವ್ಯತ್ಯಾಸವಾಗಿದೆ.
ಮೆಣಸಿನ ಬಳ್ಳಿಯಿಂದ ಕಾಳು ಬಿಡಿಸಿದ ನಂತರ ಫಸಲನ್ನು ನೀರಿನಲ್ಲಿ ಕೊಳೆಯಿಸಿ ಸಿಪ್ಪೆ ತೆಗೆಯುವುದು ಬಿಳಿ ಕಾಳು ಮೆಣಸು ಮಾಡುವ ಪದ್ಧತಿ. ಸಿಪ್ಪೆಸಹಿತ ಕಾಳು ಮೆಣಸು ಒಣಗಿದ ನಂತರ ಕಪ್ಪು ಬಣ್ಣ ಪಡೆಯಲಿದ್ದು, ಇಂದಿನ ಮಾರುಕಟ್ಟೆ ವ್ಯವಸ್ಥೆಯಲ್ಲಿ ಅದಕ್ಕೆ ಸಹ ಉತ್ತಮ ದರವಿದೆ. ಅದಾಗಿಯೂ ಶ್ರಮಜೀವಿಗಳು ಬಿಳಿ ಕಾಳುಮೆಣಸು ಸಿದ್ಧಪಡಿಸಿ ಉತ್ತಮ ಆದಾಯ ಪಡೆಯುತ್ತಿದ್ದಾರೆ.
ಕೆಲಸದ ಒತ್ತಡ ಅಧಿಕವಿರುವುದರಿಂದ ಕಳೆದ ಕೆಲ ವರ್ಷಗಳಿಂದ ಕಾಳು ಮೆಣಸು ಬೆಳೆಗಾರರ ಸಂಖ್ಯೆ ಕಡಿಮೆಯಾಗಿದೆ. ಇದರಿಂದ ಮಾರುಕಟ್ಟೆಗೆ ಸಹ ಅಗತ್ಯವಿರುವ ಪ್ರಮಾಣದಲ್ಲಿ ಕಾಳು ಮೆಣಸು ಬರುತ್ತಿಲ್ಲ. ಏಳೆಂಟು ವರ್ಷಗಳಿಂದ ಕಾಳು ಮೆಣಸು ಮಾರಾಟ ಮಾಡದೇ ದಾಸ್ತಾನು ಮಾಡಿಕೊಂಡವರು ಇದೀಗ ಅದನ್ನು ಮಾರುಕಟ್ಟೆಗೆ ತಂದು ಮಾರಾಟ ಮಾಡುತ್ತಿದ್ದಾರೆ.