ಪ್ರವಾಸಿ ತಾಣವಾಗಿದ್ದ ಕಾಳಿ ಸಂಗಮ ಪ್ರದೇಶದಲ್ಲಿ ನಾಲ್ಕು ದಶಕದ ಹಿಂದಿನ ಸೇತುವೆ ಮುರಿದ ವಿಷಯ ತಿಳಿದು ಸಾವಿರಾರು ಜನ ಸೇತುವೆ ವೀಕ್ಷಣೆಗೆ ಆಗಮಿಸುತ್ತಿದ್ದಾರೆ. ಇಲ್ಲಿಗೆ ಬರುವ ಜನರನ್ನು ಚದುರಿಸುವುದೇ ಇದೀಗ ಪೊಲೀಸರಿಗೆ ಸವಾಲಾಗಿದೆ. ಪ್ರಸ್ತುತ ಲಘು ವಾಹನ ಸಂಚಾರಕ್ಕೆ ಅವಕಾಶ ನೀಡಿದ್ದು, ಜನ ಸೇತುವೆ ಮೇಲೆ ನಿಲ್ಲುವುದು ಸರಿಯಲ್ಲ.
ಕಾಳಿ ನದಿ ಅರಬ್ಬಿ ಸಮುದ್ರ ಸೇರುವ ಪ್ರದೇಶದಲ್ಲಿ ಹಳೆಯ ಸೇತುವೆ ಇತ್ತು. ಇದರ ಜೊತೆ ಆರು ವರ್ಷದ ಹಿಂದೆ ಇನ್ನೊಂದು ಸೇತುವೆಯನ್ನು ನಿರ್ಮಿಸಲಾಗಿತ್ತು. ಹಳೆಯ ಸೇತುವೆ ಶಿಥಿಲಗೊಂಡಿರುವ ಬಗ್ಗೆ ತಜ್ಞರು ವರದಿ ನೀಡಿದ್ದರೂ ಎರಡು ಸೇತುವೆ ಮೇಲೆ ವಾಹನ ಓಡಾಟ ಮುಂದುವರೆದಿತ್ತು. ಬುಧವಾರ ಬೆಳಗ್ಗೆ 1.50ರ ಸಮಯದಲ್ಲಿ ಹಳೆಯ ಸೇತುವೆ ಕುಸಿದಿದೆ. ಈ ವಿಷಯ ತಿಳಿದು ಅನೇಕರು ಸೇತುವೆ ನೋಡಲು ಆಗಮಿಸುತ್ತಿದ್ದಾರೆ. ಆಗಮಿಸಿದವರು ಹೊಸ ಸೇತುವೆ ಮೇಲೆ ನಿಂತು ಹಳೆ ಸೇತುವೆ ನೋಡುತ್ತಿದ್ದಾರೆ.
ಪ್ರಸ್ತುತ ವಾಹನ ಓಡಾಟಕ್ಕೆ ಇಲ್ಲಿ ನಿಷೇಧ ಹೇರಲಾಗಿದ್ದು, ಮಳೆ ಜೊತೆ ಜನ ಸೇರಿರುವುದು ಸಹ ರಕ್ಷಣಾ ಕಾರ್ಯಾಚರಣೆಗೆ ತೊಂದರೆಯಾಗಿದೆ.







