ಬೀಡಿ-ಸಿಗರೇಟಿನ ಅಮಲು ಸಾಕಾಗದೇ ಶಿರಸಿಯ ವಿರಾಲ್ ಶೆಟ್ಟಿ ಗಾಂಜಾ ಮೊರೆ ಹೋಗಿದ್ದು, ಕಠಿಣ ಕ್ರಮ ಜರುಗಿಸುವ ಮೂಲಕ ಪೊಲೀಸರು ಅವರ ನಶೆ ಇಳಿಸಿದ್ದಾರೆ.
ಶಿರಸಿಯ ನಾರಾಯಣಗುರು ವಿರಾಲ್ ಈಶ್ವರ ಶೆಟ್ಟಿ ಅನುಮಾನಾಸ್ಪದ ರೀತಿಯಲ್ಲಿ ವರ್ತಿಸುತ್ತಿದ್ದರು. ಪೊಲೀಸರನ್ನು ಕಂಡ ತಕ್ಷಣ ಅವರು ಇನ್ನಷ್ಟು ಭಯಗೊಂಡರು. ಅಮಲಿನಲ್ಲಿದ್ದ ಅವರನ್ನು ಪೊಲೀಸರು ವಶಕ್ಕೆಪಡೆದು ವೈದ್ಯಕೀಯ ಪರೀಕ್ಷೆಗೆ ರವಾನಿಸಿದರು. ಆಗ, ವಿರಾಲ್ ಶೆಟ್ಟಿ ಗಾಂಜಾ ಸೇವಿಸಿರುವುದು ದೃಢವಾಯಿತು.
ಈ ಹಿನ್ನಲೆ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದರು. ಗಾಂಜಾ ಸೇವನೆಯ ಅಪಾಯಕಾರಿ ಅಂಶಗಳ ಬಗ್ಗೆ ಮನವರಿಕೆಯನ್ನು ಮಾಡಿದರು. ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆ ಪಿಎಸ್ಐ ರಾಜಕುಮಾರ ಉಕ್ಕಲಿ, ಸಿಬ್ಬಂದಿ ಮಾಂತೇಶ ಬಾರ್ಕೆರ್, ಪ್ರಸಾದ ಮಡಿವಾಳ, ಮಲ್ಲಿಕಾರ್ಜುನ ಕೊಂಡೊಜಿ, ಮಂಜುನಾಥ ವಾಲಿ, ಹನುಮಂತ ವಾಲಿಕರ್ ಈ ಕಾರ್ಯಾಚರಣೆಯಲ್ಲಿದ್ದರು.
ಚಿಕನ್ ಅಂಗಡಿಯಲ್ಲಿ ಅಕ್ರಮ ಮದ್ಯ ಮಾರಾಟ!
ಸಿದ್ದಾಪುರದ ಪಿಎಸ್ಐ ಅನೀಲ ಎಂ ಶನಿವಾರ ಎರಡು ಕಡೆ ದಾಳಿ ಮಾಡಿ ಅಕ್ರಮ ಮದ್ಯ ಮಾರಾಟ ತಡೆದಿದ್ದಾರೆ. ಮಣಿಗಾರ ಕರ್ಕಿಹಕ್ಲುವಿನ ನಾಗೇಶ ಕುಡಿಯಾ ಹಾಗೂ ಹೆಗೆಕೊಪ್ಪದ ಗಣೇಶ ಮಡಿವಾಳ ಅವರ ಅಕ್ರಮ ದಂದೆಗೆ ಅವರು ಕಡಿವಾಣ ಹಾಕಿದ್ದಾರೆ.
ಕೂಲಿ ಕೆಲಸ ಮಾಡಿಕೊಂಡಿದ್ದ ನಾಗೇಶ ಕುಡಿಯಾ ತಮ್ಮ ಮನೆಯಲ್ಲಿಯೇ ಸರಾಯಿ ದಾಸ್ತಾನು ಮಾಡಿದ್ದರು. ಮನೆಗೆ ಬರುವವರಿಗೆ ಅದನ್ನು ನೀಡಿ ಉಪಚರಿಸುತ್ತಿದ್ದರು. ಇದಕ್ಕಾಗಿ ಮಾರುಕಟ್ಟೆ ಬೆಲೆಗಿಂತಲೂ ಅಧಿಕ ಹಣ ಪಡೆಯುತ್ತಿದ್ದರು. ಇನ್ನೂ ಸಿದ್ದಾಪುರದ ಜಡ್ಡಿ ಕ್ರಾಸಿನ ಬಳಿ ರೇಣುಕಾಂಬಾ ಚಿಕನ್ ಶಾಫ್ ನಡೆಸುತ್ತಿದ್ದ ಗಣೇಶ ಮಡಿವಾಳ ಅಲ್ಲಿ ಸರಾಯಿ ವ್ಯಾಪಾರವನ್ನು ಶುರು ಮಾಡಿದ್ದರು. ಅಲ್ಲಿಯೇ ಕುಳಿತು ಮದ್ಯ ಸೇವನೆಗೆ ಅವರು ಅವಕಾಶ ಮಾಡಿಕೊಟ್ಟಿದ್ದರು. ಈ ಬಗ್ಗೆ ಅರಿತ ಪಿಎಸ್ಐ ಅನೀಲ ಎಂ ತಮ್ಮ ಪೊಲೀಸ್ ತಂಡದ ಜೊತೆ ದಾಳಿ ಮಾಡಿದರು. ಅಕ್ರಮ ಮದ್ಯ ಹಾಗೂ ಅದರಿಂದ ಬಂದ ಹಣದ ಜೊತೆ ವಿವಿಧ ಪರಿಕ್ಕರಗಳನ್ನು ವಶಕ್ಕೆ ಪಡೆದರು. ಆ ಇಬ್ಬರ ಮೇಲೆಯೂ ಪ್ರಕರಣ ದಾಖಲಿಸಿದರು.
ವ್ಯಾಪಾರಿಯ ಮನೆಯೇ ಮದ್ಯದ ಆಲಯ!
ಕಾರವಾರದ ಉಮೇಶ ಪೆಡ್ನೇಕರ್ ಅವರ ಮನೆಯಲ್ಲಿ ಗೋವಾ ಮದ್ಯ ದಾಸ್ತಾನು ಮಾಡಿದ್ದು, ಪೊಲೀಸರು ಅದನ್ನು ವಶಕ್ಕೆಪಡೆದಿದ್ದಾರೆ.
ವ್ಯಾಪಾರಿಯಾಗಿರುವ ಉಮೇಶ ಪೆಡ್ನೇಕರ್ ಕಾರವಾರದ ಶಿರವಾಡದಲ್ಲಿ ವಾಸವಾಗಿದ್ದಾರೆ. ಇಂಡಸ್ಟಿಯಲ್ ಏರಿಯಾದಲ್ಲಿರುವ ಅವರ ಮನೆಯಲ್ಲಿ ಅವರು ಗೋವಾದ ಬಗೆ ಬಗೆಯ ಸರಾಯಿ ದಾಸ್ತಾನು ಮಾಡಿದ್ದರು. ಅದನ್ನು ಮಾರಾಟ ಮಾಡಿ ಅಧಿಕ ಲಾಭಪಡೆಯಲು ಉಮೇಶ ಪೆಡ್ನೇಕರ್ ಯೋಚಿಸಿದ್ದರು. ಆದರೆ, ಪೊಲೀಸರು ಅದಕ್ಕೆ ಅಡ್ಡಿಪಡಿಸಿದ್ದಾರೆ.
ಕಾರವಾರ ಗ್ರಾಮೀಣ ಠಾಣೆಯ ಪೊಲೀಸ್ ನಿರೀಕ್ಷಕ ಯು ಎಚ್ ಸಾತೇನಹಳ್ಳಿ ಶನಿವಾರ ಶಿರವಾಡಕ್ಕೆ ಹೋಗಿದ್ದರು. ಉಮೇಶ ಪೆಡ್ನೇಕರ್ ಅವರ ಅಕ್ರಮ ಚಟುವಟಿಕೆ ಬಗ್ಗೆ ಮಾಹಿತಿಪಡೆದ ಅವರು ಅಲ್ಲಿ ದಾಳಿ ಮಾಡಿದರು. ಗೋವಾ ರಾಜ್ಯದ ಸರಾಯಿ ಬಾಟಲಿ ಹಾಗೂ ಬಿಯರ್ ಟಿನ್’ಗಳನ್ನು ಅವರು ಅಲ್ಲಿ ಪತ್ತೆ ಮಾಡಿದರು. ಪೊಲೀಸ್ ದಾಳಿ ವಿಷಯ ಅರಿತ ಉಮೇಶ ಪೆಡ್ನೇಕರ್ ಓಡಿ ಪರಾರಿಯಾದರು. ಉಮೇಶ ಪೆಡ್ನೇಕರ್ ಅವರ ಮನೆಯಲ್ಲಿದ್ದ 5ಸಾವಿರ ರೂಪಾಯಿಗೂ ಅಧಿಕ ಮೌಲ್ಯದ ಸರಾಯಿ ಬಾಟಲಿಯನ್ನು ವಶಕ್ಕೆಪಡೆದ ಪೊಲೀಸರು ಪ್ರಕರಣ ದಾಖಲಿಸಿದರು.