ಇಷ್ಟಾರ್ಥ ಸಿದ್ಧಿಗೆ ಪ್ರಸಿದ್ಧಿಪಡೆದಿರುವ ಯಲ್ಲಾಪುರದ ಚಂದ್ಗುಳಿ ಗಂಟೆ ಗಣಪನ ದೇಗುಲಕ್ಕೆ ಬರುವ ಭಕ್ತರಿಗೆ ನಿತ್ಯ ಮಧ್ಯಾಹ್ನ ಪ್ರಸಾದ ಭೋಜನ ವಿತರಣೆಗೆ ಆಡಳಿತ ಮಂಡಳಿ ನಿರ್ಧರಿಸಿದೆ. 2025ರ ಏಪ್ರಿಲ್ 21ರಿಂದ ಈ ಸೇವೆ ಶುರುವಾಗಲಿದೆ.
ಶ್ರೀ ಸಿದ್ಧಿವಿನಾಯಕ ಸನ್ನಿಧಿಯಲ್ಲಿ ಅಷ್ಟಬಂಧ ಮಹೋತ್ಸವ ಮುಕ್ತಾಯವಾದ ಹಿನ್ನಲೆ ಗುರುವಾರ ಲೆಕ್ಕ-ಪತ್ರ ಒಪ್ಪಿಸುವ ಸಭೆ ನಡೆಯಿತು. `67.85 ಲಕ್ಷ ರೂ ಅಷ್ಟಬಂಧ ಉತ್ಸವದಿಂದ ಸಂಗ್ರಹವಾಗಿದ್ದು, ಕಾರ್ಯಕ್ರಮಗಳಿಗೆ 54.53 ಲಕ್ಷ ರೂ ವೆಚ್ಚವಾಗಿದೆ. 13.31 ಲಕ್ಷ ರೂ ದೇಗುಲಕ್ಕೆ ಉಳಿತಾಯವಾಗಿದೆ’ ಎಂದು ಆಡಳಿತ ಮಂಡಳಿಯವರು ಸಭೆಗೆ ಲೆಕ್ಕ ಒಪ್ಪಿಸಿದರು.
`ಏ 21ರಂದು ನಡೆಯುವ ಸಂಪ್ರೋಕ್ಷಣ್ಯ ದಿನದಿಂದ ಪೂಜೆ, ಗಣಹವನ ಸೇರಿದಂತೆ ವಿವಿಧ ಸೇವಾ ಕೈಂಕರ್ಯಗಳು ಆರಂಭಗೊಳ್ಳಲಿವೆ. ಅಂದಿನಿAದ ಭಕ್ತಾದಿಗಳಿಗೆ ಪ್ರತಿದಿನ ಮಧ್ಯಾಹ್ನ ಪ್ರಸಾದ ಭೋಜನ ವ್ಯವಸ್ಥೆ ಮಾಡಲಾಗುತ್ತದೆ’ ಎಂದು ದೇಗುಲದ ಅಧ್ಯಕ್ಷ ವಿ ಲಕ್ಷ್ಮೀನಾರಾಯಣ ಭಟ್ಟ ತಾರಿಮಕ್ಕಿ ಈ ವೇಳೆ ಘೋಷಿಸಿದರು.
`ದೇಗುಲದ ಚಂದ್ರಶಾಲೆಯಲ್ಲಿರುವ 18 ಕಂಬಗಳಲ್ಲಿ ಮುದ್ಗಲ ಪುರಾಣದಲ್ಲಿ ಉಲ್ಲೇಖಿಸಲಾದಂತೆ ವಿಭಿನ್ನವಾಗಿ 18 ಗಣಪತಿ ವಿಗ್ರಹಗಳನ್ನು ಕೆತ್ತಲಾಗಿದೆ. ಅತ್ಯಂತ ವಿಶಿಷ್ಟವಾದ ಈ ದೇಗುಲ ದರ್ಶನಕ್ಕೆ ದೇಶ-ವಿದೇಶಗಳಿಂದ ಭಕ್ತರು ಬರುತ್ತಿದ್ದಾರೆ. ಅವರ ಅನುಕೂಲಕ್ಕಾಗಿ ಇನ್ನಷ್ಟು ಅಭಿವೃದ್ಧಿ ಚಟುವಟಿಕೆ ನಡೆಸಲು ನಿರ್ಧರಿಸಲಾಗಿದೆ. ದೇವಸ್ಥಾನದ ಒಳಗೆ ಮತ್ತು ಹೊರಗೆ ಶುಚಿತ್ವದ ಜೊತೆಗೆ ಅಗತ್ಯ ಸೌಕರ್ಯ ಕಲ್ಪಿಸಲು ಸಮಿತಿ ಬದ್ಧವಾಗಿದೆ’ ಎಂದವರು ಹೇಳಿದರು.
ಈ ವೇಳೆ ಹಾಜರಿದ್ದ ಕೆಲ ಭಕ್ತರು ಒಂದು ತಿಂಗಳ ಅವಧಿಯ ಅನ್ನದಾನ ಸೇವೆಯ ಸಂಪೂರ್ಣ ಹೊಣೆ ಹೊತ್ತರು.