ಕೊಲೆ ಪ್ರಯತ್ನ ನಡೆಸಿದ ವ್ಯಕ್ತಿಗೆ ನ್ಯಾಯಾಲಯ 10 ವರ್ಷದ ಜೈಲು ಶಿಕ್ಷೆ ಪ್ರಕಟಿಸಿದೆ. ಶಿಕ್ಷೆ ಅನುಭವಿಸುವುದರ ಜೊತೆ ಸಾವಿನ ದವಡೆಯಿಂದ ತಪ್ಪಿಸಿಕೊಂಡವನಿಗೆ 10 ಸಾವಿರ ರೂ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.
ಶಿರಸಿ ತಾಲೂಕಿನ ಬನವಾಸಿಯ ದೊಡ್ಡಕೇರಿಯ ದಿನೇಶ ಅಶೋಕ ಚನ್ನಯ್ಯ ಎಂಬಾತರು ಯೋಗೇಶ ಈರಪ್ಪ ಚನ್ನಯ್ಯ ಎಂಬಾತರ ಕೊಲೆಗೆ ಮುಂದಾಗಿದ್ದರು. 2022ರ ಜುಲೈ 12ರಂದು ದಿನೇಶ ಚನ್ನಯ್ಯ ಅವರು ಯೋಗೇಶ ಚೆನ್ನಯ್ಯ ಅವರಿಗೆ ಚಾಕುವಿನಿಂದ ತಿವಿದು ಕೊಲೆಗೆ ಪ್ರಯತ್ನಿಸಿದ್ದರು.
ಚಾಕುವಿನಿಂದ ತಪ್ಪಿಸಿಕೊಂಡ ಯೋಗೇಶ ಚನ್ನಯ್ಯ ಪೊಲೀಸ್ ಠಾಣೆಗೆ ಧಾವಿಸಿ ಬಂದು ದೂರು ನೀಡಿದ್ದರು. ಬನವಾಸಿಯ ಅಂದಿನ ಸಿಪಿಐ ಹನುಮಂತ ಬಿರಾದಾರ ಹಾಗೂ ಪಿಎಸ್ಐ ಚಂದ್ರಕಲಾ ಪತ್ತಾರ್ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯದೀಶ ಕಿರಣ ಕಿಣಿ ಅವರು ವಾದ ಆಲಿಸಿದರು.
ಅದರ ಪ್ರಕಾರ ಸೋಮವಾರ ಕೊಲೆ ಯತ್ನದ ಆರೋಪ ಸಾಭೀತಾಗಿದ್ದರಿಂದ ದಿನೇಶ ಅಶೋಕ ಚನ್ನಯ್ಯ 10 ವರ್ಷ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಅವರು ಆದೇಶಿಸಿದರು. ಜೊತೆಗೆ 22 ಸಾವಿರ ರೂ ದಂಡವನ್ನು ಪಾವತಿಸಲು ಸೂಚಿಸಿದರು. ಇದರೊಂದಿಗೆ ಚಾಕುವಿನಿಂದ ತಿವಿತಕ್ಕೆ ಒಳಗಾದ ಯೋಗೇಶ ಈರಪ್ಪ ಚನ್ನಯ್ಯ ಅರಿಗೆ 10 ಸಾವಿರ ರೂ ಪರಿಹಾರ ನೀಡಲು ತೀರ್ಪು ನೀಡಿದರು.
ಈ ಪ್ರಕರಣದ ಗಂಭಿರತೆಯ ಬಗ್ಗೆ ಸರಕಾರಿ ಅಭಿಯೋಜಕರಾದ ರಾಜೇಶ ಎಂ ಮಳಗಿಕರ್ ವಾದ ಮಂಡಿಸಿದ್ದರು.