ಮುಂಡಗೋಡ: ಬಾಲ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ. ಅವರ ಸಾವಿನ ನಂತರ ಬಾಲ ಕಾರ್ಮಿಕ ಪದ್ಧತಿ ಜೀವಂತವಾಗಿರುವ ಬಗ್ಗೆ ಬೆಳಕಿಗೆ ಬಂದಿದೆ.
ದೇವಕಿಶನ್ ಬೀಲ್ (14 ವರ್ಷ) ಎಂಬಾತರು ಪಾನಿಪುರಿ ಅಂಗಡಿಯಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ದೇವಕಿಶನ್ ಬೀಲ್ ರಾಜಸ್ಥಾನದ ಚಿತ್ತೋಡಗಡ ಜಿಲ್ಲೆಯ ಬದೇಸಾರ ತಾಲೂಕಿನವರು. ಉಸಿರಾಟ ಸಮಸ್ಯೆ, ವಾಂತಿ ಹಾಗೂ ಜ್ವರದಿಂದ ಅವರು ಬಳಲುತ್ತಿದ್ದರು.
ದೇವಕಿಶನ್ ಬೀಲ್ ಅವರ ಆರೋಗ್ಯ ಹದಗೆಟ್ಟ ಕಾರಣ ಬಂಕಾಪುರ ರಸ್ತೆಯ ಹೆಗಡೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡಿ 22ರಂದು ಅವರು ಚಿಕಿತ್ಸೆಗೆ ಸ್ಪಂದಿಸದೇ ಸಾವನಪ್ಪಿದರು. ದೇವಕಿಶನ್ ಬೀಲ್ ಅಲ್ಲಿ ಇಲ್ಲಿ ತಿರುಗಾಡುತ್ತಿದ್ದಾಗ ಏಕಾಏಕಿ ಅನಾರೋಗ್ಯಕ್ಕೆ ಒಳಗಾದ ಬಗ್ಗೆಯೂ ಹೇಳಲಾಗುತ್ತಿದೆ. ಅವರ ಸಾವಿಗೆ ಸ್ಪಷ್ಟ ಕಾರಣ ಗೊತ್ತಾಗಿಲ್ಲ.
ಯಲ್ಲಾಪುರ ರಸ್ತೆಯಲ್ಲಿ ಐಸ್ ಕ್ರೀಂ ಅಂಗಡಿ ನಡೆಸುವ ಪಾಪುನಾಥ ಯೋಗಿ ಅವರು ದೇವಕಿಶನ್ ಬೀಲ್ ಅವರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.
ಬಾಲ ಕಾರ್ಮಿಕರನ್ನು ದುಡಿಸಿಕೊಳ್ಳುವುದು ಅಪರಾಧ. ಬಾಲ ಕಾರ್ಮಿಕರು ಕಂಡಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ: 1908ಗೆ ಫೋನ್ ಮಾಡಿ.