ಗಣೇಶ ಹಬ್ಬದ ಅವಧಿಯಲ್ಲಿ ಶಿರಸಿ ರಾಯರಪೇಟೆಯ ಕಡೆ ಹೋದರೆ ಅಲ್ಲಿ ಪುಠಾಣಿಗಳ ಕೈಯಲ್ಲಿ ಅರಳುವ ನೂರಾರು ಮೂರ್ತಿಗಳು ಕಾಣಿಸುತ್ತವೆ. ಯಾವುದೇ ಆಡಂಬರವಿಲ್ಲ. ರಾಸಾಯನಿಕ ಬಣ್ಣಗಳ ಅಲಂಕಾರವೂ ಇಲ್ಲ!
ರಾಯರಪೇಟೆ ವಿಷ್ಣುಮಠದಲ್ಲಿ ಹೀಗೊಂದು ವಿಶಿಷ್ಟ ಗಣಪತಿ ಪ್ರದರ್ಶನ ನಡೆಯುತ್ತಿದೆ. ಪುಟ್ಟ ಮಕ್ಕಳಿಗೆ ಇಲ್ಲಿ ಗಣಪನ ಮೂರ್ತಿ ತಯಾರಿಸುವ ಶಿಬಿರ ನಡೆದಿದೆ. ಶಿಬಿರದಲ್ಲಿ ಭಾಗವಹಿಸುವವರಿಗೆ ಸ್ಪರ್ಧೆಯೂ ಇದೆ. ಇಲ್ಲಿ ಪೂಜೆಗೆಂದು ತಯಾರಿಸಲಾದ ಹೇರಂಬ ಗಣಪತಿಯ ಮೂರ್ತಿ ಅತ್ಯಂತ ವಿಶಿಷ್ಟವಾಗಿದೆ. ಹಲವು ವಿಶೇಷಗಳೊಂದಿಗೆ ಭಕ್ತಿಯಿಂದ ಸಿದ್ಧವಾಗುವ ಇಲ್ಲಿನ ಗಣಪ ನಾಡಿಗೆ ಮಾದರಿ.
ಮಣ್ಣಿನ ಮೂರ್ತಿ ಮಾತ್ರವಲ್ಲದೇ ಗಣಪತಿ ಚಿತ್ರ ಬರೆಯುವುದನ್ನು ಸಹ ಇಲ್ಲಿ ಕಲಿಸಲಾಗುತ್ತದೆ. ಆ ಸ್ಪರ್ಧೆಯಲ್ಲಿ ವಿಜೇತರಾದವರಿಗೂ ಬಗೆ ಬಗೆಯ ಬಹುಮಾನಗಳಿವೆ. ಮಹಾ ವಿಷ್ಣುವಿನ ದೇವಸ್ಥಾನದಲ್ಲಿ ಎಡಗಡೆಗೆ ಈ ಪ್ರದರ್ಶನ ಆಯೋಜಿಸಲಾಗಿದ್ದು, ಪುಟ್ಟ ಮಕ್ಕಳಲ್ಲಿ ಗಣಪತಿಯ ಬಗ್ಗೆ ವಿಶೇಷ ಭಕ್ತಿ ಹಾಗೂ ಭಾರತೀಯ ಸಂಸ್ಕೃತಿಯನ್ನು ಉಳಿಸಿ – ಬೆಳೆಸಲು ಇಂಥ ಕಾರ್ಯಕ್ರಮ ಹೆಚ್ಚು ಪ್ರಯೋಜನಕಾರಿ. ಗಣೇಶೋತ್ಸವದ ಅವಧಿಯಲ್ಲಿ ಆ ಗಣೇಶೋತ್ಸವ ಮಂಡಳಿ ಮಾಡಿದ ವಿಶಿಷ್ಟ ಹೆಜ್ಜೆ ಎಲ್ಲರಿಗೂ ಪ್ರೇರಣೆಯಾಗಲಿ.
ಪುಟ್ಟ ಮಕ್ಕಳು ಮಾಡಿದ ಗಣಪತಿ ಮೂರ್ತಿಯ ಅಂದ, ಚಂದ, ಗತ್ತು ನೋಡಿ ಅನುಭವಿಸಲು ನೀವೆಲ್ಲರೂ ಒಮ್ಮೆ ಭೇಟಿ ನೀಡಬೇಕು..!
ಡಾ ರವಿಕಿರಣ ಪಟವರ್ಧನ ಶಿರಸಿ