ಶಿರಸಿ ನಗರಸಭೆ ನಿತ್ಯ 12 ಸಾವಿರ ಜನರಿಗೆ ಕುಡಿಯುವ ನೀರು ಪೂರೈಸುತ್ತದೆ. ಆದರೆ, ಪೈಪ್ ಸೋರಿಕೆಯಿಂದ ಶುದ್ದ ಕುಡಿಯುವ ನೀರು ಚರಂಡಿ ಪಾಲಾಗುತ್ತಿದೆ.
ಕೆಂಗ್ರೆ ಹಾಗೂ ಮಾರಿಗದ್ದೆ ಜಾಕ್ ವೆಲ್ ಮೂಲಕ ಶಿರಸಿಗೆ ನೀರು ಸರಬರಾಜಾಗುತ್ತದೆ. ಹೀಗೆ ಸರಬರಾಜಾಗುವ ನೀರು ಅನೇಕ ವಾರ್ಡುಗಳಲ್ಲಿ ಎಲ್ಲೆಂದರಲ್ಲಿ ಸೋರಿಕೆಯಾಗುತ್ತಿದೆ. ಚರಂಡಿ ಪಕ್ಕವೇ ನೀರಿನ ಪೈಪುಗಳನ್ನು ಅಳವಡಿಸಿದ್ದರಿಂದ ಶುದ್ದ ನೀರಿಗೆ ಚರಂಡಿಯ ಕೊಳಚೆ ಮಿಶ್ರಣವಾಗುವ ಆತಂಕವೂ ಎದುರಾಗಿದೆ.
ನಗರದ ವಿವಿಧ ರಸ್ತೆ ಕೆಲಸ ನಡೆಯುತ್ತಿದೆ. ಈ ವೇಳೆ ಕುಡಿಯುವ ನೀರಿನ ಪೈಪುಗಳನ್ನು ಒಡೆಯಲಾಗುತ್ತಿದೆ. ಹೊಸ ಪೈಪ್ಲೈನ್ ಜೋಡಣೆ ಕಾರ್ಯವೂ ನಡೆದಿದ್ದು, ಅದು ಮುಕ್ತಾಯವಾಗಿಲ್ಲ. ನಿತ್ಯ 15ಕ್ಕೂ ಅಧಿಕ ಕಡೆ ನೀರು ಪೊಲಾಗುತ್ತಿರುವ ಬಗ್ಗೆ ನಗರಸಭೆಗೆ ದೂರು ಬರುತ್ತಿದೆ. ಆದರೆ, ಸೋರಿಕೆ ತಡೆಗೆ ಮಾತ್ರ ಕ್ರಮವಾಗುತ್ತಿಲ್ಲ.
`ಕುಡಿಯುವ ನೀರು ಹೀಗೆ ಪೊಲಾಗುತ್ತಿದ್ದರೆ ಬೇಸಿಗೆಯಲ್ಲಿ ಜಲಕ್ಷಾಮ ನಿಶ್ಚಿತ’ ಎಂಬುದು ಅನೇಕರ ಆತಂಕವಗಿದೆ. ಕಳೆದ ವರ್ಷ ಸಹ ಮಾರ್ಚ ನಂತರ ನೀರಿಗಾಗಿ ಜನ ತೊಂದರೆ ಅನುಭವಿಸಿದ್ದರು. `ಈ ಬಾರಿ ಹಾಗೇ ಆಗದಂತೆ ಎಚ್ಚರವಹಿಸಿ’ ಎಂದು ಶಿರಸಿಗರು ಮನವಿ ಮಾಡುತ್ತಿದ್ದಾರೆ.
ಇನ್ನೂ ಕೆಲವು ಕಡೆ ಜಲ ಶುದ್ದೀಕರಣ ಘಟಕಗಳ ನಿರ್ವಹಣೆ ಸರಿಯಾಗಿಲ್ಲ. ಪರಿಣಾಮ ಕಲುಷಿತ ನೀರು ನಲ್ಲಿಗೆ ಬರುತ್ತಿದೆ. ಅದನ್ನು ಸರಿಪಡಿಸುವ ಗೋಜಿಗೆ ನಗರಸಭೆ ಮುಂದಾಗಿಲ್ಲ.