ಯಲ್ಲಾಪುರ: ವಜ್ರಳ್ಳಿ ಸಹಕಾರಿ ಸಂಘದ ಅಭಿವೃದ್ಧಿಗಾಗಿ ಸಾಕಷ್ಟು ರೀತಿಯಲ್ಲಿ ಶ್ರಮಿಸಿದ್ದ ಟಿ ಎನ್ ಭಟ್ಟ ನಡಿಗೆಮನೆ (63) ಅವರು ಬುಧವಾರ ಭೂ ಲೋಕದ ಯಾತ್ರೆ ಮುಗಿಸಿದ್ದಾರೆ. ಅನಾರೋಗ್ಯದ ಹಿನ್ನಲೆ ವಾರದ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚೇತರಿಸಿಕೊಂಡಿದ್ದು, ಇದೀಗ ಹೃದಯಘಾತದಿಂದ ಸಾವನಪ್ಪಿದ್ದಾರೆ.
ವಜ್ರಳ್ಳಿಯ ಆದರ್ಶ ಸೇವಾ ಸಹಕಾರಿ ಸಂಘದ ನಿರ್ದೇಶಕರಾಗಿದ್ದ ಅವಧಿಯಲ್ಲಿ ಅವರು ರೈತರಿಗೆ ಹೊರೆಯಾಗುತ್ತಿದ್ದ ಆಸಾಮಿ ಖಾತೆಯ ಶೇ 12ರ ಬಡ್ಡಿದರವನ್ನು ಶೇ 11ಕ್ಕೆ ಇಳಿಸಿದ್ದರು. ಸೊಸೈಟಿಯಿಂದಲೇ ರೈತರಿಗೆ ತರಕಾರಿ ಬೀಜಗಳನ್ನು ವಿತರಿಸಿ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡಿದ್ದರು. ಸ್ವತಃ ಶುಂಟಿ ಹಾಗೂ ಕಬ್ಬನ್ನು ವಾಣಿಜ್ಯ ಬೆಳೆಯಾಗಿ ಬೆಳೆದು ಇತರರನ್ನು ಸಹ ಪ್ರೇರೇಪಿಸುತ್ತಿದ್ದರು. ಭೂಮಿ ಖರೀದಿ, ಭೂ ಅಭಿವೃದ್ಧಿ ಸಾಲ ಅಗತ್ಯವಿದ್ದವರಿಗೆ ಸಕಾಲದಲ್ಲಿ ಸಾಲ ಕೊಡಿಸಿ ನೆರವಾಗಿದ್ದರು.
ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಸಹ ಟಿ ಎನ್ ಭಟ್ಟ ನಡಿಗೆಮನೆ ಅವರು ಮುಂದಿದ್ದರು. ವಜ್ರಳ್ಳಿ ಯುವಕ ಸಂಘದ ಅಧ್ಯಕ್ಷರಾಗಿ ಸಾರ್ವಜನಿಕ ಜೀವನ ಪ್ರವೇಶಿಸಿದ ಅವರು ಅಲ್ಲಿನ ಹೈಸ್ಕೂಲು ನಿರ್ದೇಶಕರಾಗಿದ್ದರು. ಸಹಕಾರಿ ಕ್ಷೇತ್ರಕ್ಕೆ ಸಂಬAಧಿಸಿ ಟಿಎಂಎಸ್ ಸಂಸ್ಥೆಯ ನಿರ್ದೇಶಕರಾಗಿದ್ದರು. ಎಪಿಎಂಸಿ ನಿರ್ದೇಶಕರಾಗಿಯೂ ಜನರ ನೋವಿಗೆ ಸ್ಪಂದಿಸುತ್ತಿದ್ದರು. ಸೋಂದಾ ಸ್ವಣ್ವಲ್ಲಿ ಮಠದ ಆಡಳಿತ ಮಂಡಳಿ ನಿರ್ದೇಶಕರಾಗಿದ್ದ ಅವರು ಚಿನ್ನಾಪುರ ದೇವಾಲಯ ಕಟ್ಟಡ ಸಮಿತಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಅಂತಿಮ ದರ್ಶನಕ್ಕೆ ಅವಕಾಶ
ಟಿಎಂಎಸ್ ನಿರ್ದೇಶಕರಾಗಿದ್ದ ಟಿ ಎನ್ ಭಟ್ಟ ನೆಡಿಗೆಮನೆ ಅವರ ನಿಧನದ ಕಾರಣ ಟಿಎಂಎಸ್’ನ ಪೆಟ್ರೊಲ್ ಪಂಪ್ಹೊರತುಪಡಿಸಿ ಉಳಿದ ಎಲ್ಲಾ ವಿಭಾಗಕ್ಕೆ ಡಿ 19ರಂದು ರಜೆ ಘೋಷಿಸಲಾಗಿದೆ. ಡಿ 18ರ ರಾತ್ರಿ 8.30 ರಿಂದ 9.00ರ ಅವಧಿಯಲ್ಲಿ ಟಿ.ಎಂ.ಎಸ್ ಸೂಪರ್ ಮಾರ್ಟ ಆವಾರದಲ್ಲಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಸಂತಾಪ:
ಹಲವು ಕ್ಷೇತ್ರಗಳಲ್ಲಿ ಛಾಪು ಮೂಡಿಸಿದ ಟಿ ಎನ್ ಭಟ್ಟ ನಡಿಗೆಮನೆ ಅವರ ನಿಧನಕ್ಕೆ ಅನೇಕರು ಸಂತಾಪ ಸೂಚಿಸಿದ್ದಾರೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ, ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ, ಪ್ರಮುಖರಾದ ಪ್ರಮೋದ ಹೆಗಡೆ ಸೇರಿ ಅನೇಕರು ಸಂತಾಪ ಸೂಚಿಸಿದ್ದಾರೆ.