ಜನ ವಿರೋಧದ ನಡುವೆಯೂ ಹೊನ್ನಾವರದಲ್ಲಿ ವಾಣಿಜ್ಯ ಬಂದರು ನಿರ್ಮಾಣ ಬಹುತೇಕ ಖಚಿತವಾಗಿದೆ. ವಾಣಿಜ್ಯ ಬಂದರು ಕಾಮಗಾರಿಗೆ ಸರ್ಕಾರ ಅನುಮತಿ ನೀಡಿದ್ದು, ಟೆಂಡರ್ ಪಡೆದ ಕಂಪನಿ ಕೆಲಸವನ್ನು ಶುರು ಮಾಡಿದೆ. `ಈ ಕೆಲಸಕ್ಕೆ ಅಡ್ಡಿಪಡಿಸಿದರೆ ಕಾನೂನು ಕ್ರಮ ಅನಿವಾಯ’ ಎಂದು ಪೊಲೀಸ್ ಅಧೀಕ್ಷಕ ಎಂ ನಾರಾಯಣ ಎಚ್ಚರಿಕೆ ನೀಡಿದ್ದಾರೆ.
`ಕಾಮಗಾರಿ ನಡೆಸದಂತೆ ಹೋರಾಟಗಾರರು ನ್ಯಾಯಾಲದ ಆದೇಶ ಪಡೆದು ಬಂದರೆ ಹೋರಾಟಗಾರರಿಗೆ ರಕ್ಷಣೆ ಒದಗಿಸುತ್ತೇವೆ. ಇಲ್ಲವಾದಲ್ಲಿ ಕಾಮಗಾರಿ ನಡೆಸುವವರಿಗೆ ರಕ್ಷಣೆ ನೀಡಬೇಕಾಗುತ್ತದೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಮೀನುಗಾರರು ಹಾಗೂ ಬಂದರು ವಿರೋಧಿ ಹೋರಾಟಗಾರರ ಜೊತೆ ಎಂ ನಾರಾಯಣ ಸಭೆ ನಡೆಸಿ ಅವರ ಮನವೊಲೈಕೆಯ ಪ್ರಯತ್ನವನ್ನು ಮಾಡಿದ್ದಾರೆ. `ಕಾನೂನಿನ ಪ್ರಕಾರ ಈ ಕಾಮಗಾರಿ ಶುರುವಾಗಿದೆ. ಬಂದರು ನಿರ್ಮಾಣ ಮಾಡಬಾರದು ಎಂದು ಈವರೆಗೂ ಯಾವುದೇ ನಿರ್ದೇಶನವಿಲ್ಲ. ಹೀಗಾಗಿ ಇದಕ್ಕೆ ಯಾರೂ ಅಡ್ಡಿಪಡಿಸಬಾರದು’ ಎಂದವರು ಮೊದಲು ಮನವಿ ಮಾಡಿದರು.
`ಎಲ್ಲಾ ಅನುಮತಿಪಡೆದು ಕಾಮಗಾರಿ ಮಾಡುವಾಗ ಜನ ವಿರೋಧಿಸುವುದು ಸರಿಯಲ್ಲ. ಹೋರಾಟದ ಹೆಸರಿನಲ್ಲಿ ಅಧಿಕಾರಿಗಳ ಕರ್ತವ್ಯ ತಡೆ ಕಾನೂನುಬಾಹಿರವಾಗಲಿದ್ದು, ಅಂಥವರ ಮೇಲೆ ಕ್ರಮ ಅನಿವಾರ್ಯ’ ಎಂದು ಎಚ್ಚರಿಸಿದರು. `ಕಾಮಗಾರಿ ತಡೆದರೆ ಕಂಪನಿಗೆ ಹಾನಿ ಆಗುತ್ತದೆ. ಆಗ, ಕಂಪನಿ ಹಾನಿ ಭರಿಸುವಂತೆ ಪರಿಹಾರ ಮಂಡಳಿಯ ಮೊರೆ ಹೋಗುತ್ತದೆ. ಸರ್ಕಾರ ಕಂಪನಿಗೆ ದಂಡ ಪಾವತಿಸಬೇಕಿದ್ದು, ಅದರ ಹೊಣೆ ಜನರ ಮೇಲೆ ಬೀಳುತ್ತದೆ’ ಎಂದು ವಿವರಿಸಿದರು.
ಮೀನುಗಾರ ಮುಖಂಡರಾದ ಹಮ್ಜಾ ಪಟೇಲ್, ರಾಜು ತಾಂಡೇಲ್, ವಿವನ್ ಫರ್ನಾಂಡಿಸ್, ಹೋರಾಟಗಾರ ಪರ ವಕೀಲ ಎಂ ಎನ್ ಸುಬ್ರಹ್ಮಣ್ಯ, ಮಲ್ಲುಖುರ್ವಾ ಮೈದಿನ್ ಮಸಿಧಿಯ ಹುಸೈನ್, ಮಹಮ್ಮದ್ ಖೋಯಾ ಸೇರಿ ಮೀನುಗಾರರ ಸಮಸ್ಯೆಯ ಕುರಿತು ವಿವರಿಸಿದರು.