ಕುಮಟಾ: ವೃಕ್ಷಮಾತೆ ತುಳಸಿ ಗೌಡ ಅವರ ನಿಧನಕ್ಕೆ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರ ಸಂತಾಪ ಸೂಚಿಸಿದೆ. ಮಾತೃಸ್ವರೂಪದ ಅವರ ನಿಧನ ನಾಡಿಗೆ ಆದ ನಷ್ಟ ಎಂದು ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಿಸ್ ಹೇಳಿದ್ದಾರೆ.
`ಬರಿಗಾಲಿನಲ್ಲಿ ಕಾಡು ಸಂಚರಿಸುತ್ತಿದ್ದ ತುಳಸಿ ಗೌಡ ಅವರು ಅರಣ್ಯ ಬೆಳವಣಿಗೆಯಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದರು. ಗಿಡ, ಮರ, ಬಳ್ಳಿಗಳನ್ನು ಮಕ್ಕಳ ರೀತಿ ಅವರು ಪ್ರೀತಿಸುತ್ತಿದ್ದರು. ಅವರ ನಡೆ, ನುಡಿ ಸರಳ ವ್ಯಕ್ತಿತ್ವ ಎಲ್ಲರಿಗೂ ಮಾದರಿ. ತುಳಸಿ ಗೌಡ ಅವರ ಪರಿಸರ ಪ್ರೇಮವನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು. ಆ ಮೂಲಕ ಅವರ ಆದರ್ಶವನ್ನು ಅನುಸರಿಸಬೇಕು’ ಎಂದವರು ಹೇಳಿದ್ದಾರೆ.
`ಬಡತನದ ಬದುಕಿನಲ್ಲೂ ವೃಕ್ಷಪ್ರೇಮ ಮೆರೆದು ಪರಿಸರವನ್ನು ಶ್ರೀಮಂತಗೊಳಿಸಿದ ತುಳಸಿ ಗೌಡ ಅವರ ಅಗಲುವಿಕೆ ಅಪಾರ ನೋವು ತರಿಸಿದೆ. ವೃಕ್ಷಮಾತೆ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ತುಳಸಿ ಗೌಡ ಅಗಲಿಕೆಯ ಆಘಾತದಿಂದ ಅವರ ಕುಟುಂಬ ಹೊರಬರಲಿ’ ಎಂದು ಅವರು ಪ್ರಾರ್ಥಿಸಿದ್ದಾರೆ.