ಸಿದ್ದಾಪುರ: `ಬಾಣಂತಿ ಸಾವಿನ ನೋವು ಎಲ್ಲರಿಗೂ ಇದೆ. ಆದರೆ, ಹೆಣದ ಮುಂದೆ ರಾಜಕೀಯ ಮಾಡುವುದು ಸರಿಯಲ್ಲ’ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದ್ದಾರೆ. `ಮಂಗನ ಕಾಯಿಲೆಯಿಂದ ಅನೇಕರು ಸಾವನಪ್ಪಿದ್ದಾರೆ. ಆ ವೇಳೆ ಪ್ರತಿಭಟನಾಕಾರರು ಎಲ್ಲಿದ್ದರು?’ ಎಂದು ಸಹ ಭೀಮಣ್ಣ ನಾಯ್ಕ ಪ್ರಶ್ನಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು `ಕೆಲವರಿಗೆ ಹೆಣದ ಮೇಲೆ ರಾಜಕೀಯ ಮಾಡುವುದು ಹವ್ಯಾಸವಾಗಿದೆ. ಆದರೆ, ಈ ರೀತಿ ಮಾಡುವುದು ಶೋಭೆಯಲ್ಲ’ ಎಂದು ಕಿವಿಮಾತು ಹೇಳಿದರು. `ಸಿದ್ದಾಪುರದ ತಾಲೂಕು ಆಸ್ಪತ್ರೆಯ ಹೆರಿಗೆ ತಜ್ಞ ಡಾ ರವಿರಾಜ್ 7 ವರ್ಷದಿಂದ ಕೆಲಸದಲ್ಲಿದ್ದಾರೆ. 5257 ಹೆರಿಗೆಗಳನ್ನು ಅವರು ಮಾಡಿಸಿದ್ದಾರೆ.
ಆದರೆ, 10 ದಿನದ ಅವಧಿಯಲ್ಲಿ ಇಬ್ಬರು ಮಹಿಳೆಯರು ಆರೋಗ್ಯದಲ್ಲಿನ ಏರುಪೇರಿನಿಂದ ಸಾವನಪ್ಪಿದ್ದು, ಆ ವಿಷಯದಲ್ಲಿ ರಾಜಕೀಯ ಸರಿಯಲ್ಲ’ ಎಂದರು. `ವೈದ್ಯರ ತಪ್ಪಿನಿಂದ ಸಾವು ಆಗಿದ್ದರೆ ಆ ಬಗ್ಗೆ ತನಿಖೆ ನಡೆಯಬೇಕು. ತನಿಖೆಗಾಗಿ ನಾನು ಸೂಚನೆ ನೀಡಿದ್ದೇನೆ’ ಎಂದು ಸ್ಪಷ್ಠಪಡಿಸಿದರು.
`ಆಸ್ಪತ್ರೆ ಎದುರು ಹೆಣವಿಟ್ಟು ಪ್ರತಿಭಟನೆ ನಡೆಸಿದರೆ ಇತರೆ ರೋಗಿಗಳಿಗೆ ತೊಂದರೆಯಾಗುತ್ತದೆ. ದೊಡ್ಡದಾಗಿ ಧಿಕ್ಕಾರ ಕೂಗುವ ಪ್ರದೇಶ ಸಹ ಅದಲ್ಲ. ಶಾಸಕರ ವಿರುದ್ಧದ ಪ್ರತಿಭಟನೆ ಆಗಿದ್ದರೆ ಶಾಸಕರ ಕಚೇರಿ ಎದುರು ಅಥವಾ ಆಡಳಿತ ಸೌಧದ ಮುಂದೆ ಮಾಡಬೇಕು. ಆಸ್ಪತ್ರೆ ಮುಂದೆ ರೋಗಿಗಳಿಗೆ ತೊಂದರೆ ಕೊಡಬಾರದು’ ಎಂದವರು ಹೇಳಿದ್ದಾರೆ.
ಕೆಲಸಕ್ಕೆ ಬರಲು ವೈದ್ಯರ ಹಿಂದೇಟು
`ಪ್ರತಿಭಟನಾಕಾರರ ಆಕ್ರೋಶಕ್ಕೆ ಬೆದರಿದ ವೈದ್ಯರು ಆಸ್ಪತ್ರೆಗೆ ಬರಲು ಭಯ ಪಡುತ್ತಿದ್ದಾರೆ. ಶನಿವಾರ ಸಹ ಕೆಲವರು ಹಾಜರಾಗಿರಲಿಲ್ಲ. ನಾನು ಅವರನ್ನು ಸಮಾಧಾನ ಮಾಡಿ, ರೋಗಿಗಳಿಗೆ ತೊಂದರೆಯಾಗದoತೆ ಚಿಕಿತ್ಸೆ ನೀಡಿ ಎಂದು ಮನವಿ ಮಾಡಿದ್ದೇನೆ’ ಎಂದರು. `ರಾಜ್ಯದ ಎಲ್ಲಡೆ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿದೆ. ಇಂತ ಪ್ರತಿಭಟನೆ ನಡೆದಾಗ ಈ ಕ್ಷೇತ್ರಕ್ಕೆ ವೈದ್ಯರು ಬರಲು ಹೆದರುತ್ತಾರೆ. ಇದರಿಂದ ಇನ್ನಷ್ಟು ಸಮಸ್ಯೆ ಆಗುತ್ತದೆ’ ಎಂದು ಎಚ್ಚರಿಸಿದರು.
`ಸಾವಿನ ಬಗ್ಗೆ ಅನುಕಂಪ ಇದ್ದವರು ಮಂಗನ ಕಾಯಿಲೆಯಿಂದ ಸಾವನಪ್ಪಿದವರ ಬಗ್ಗೆ ಹೋರಾಟ ನಡೆಸಲಿ. ಆ ವೇಳೆ ಅವರ ಅನುಕಂಪ ಎಲ್ಲಿ ಹೋಗಿತ್ತು?’ ಎಂದು ಪ್ರಶ್ನಿಸಿದರು. `ಅತಿವೃಷ್ಠಿಯಿಂದ ಸಾಕಷ್ಟು ಜನ ಮನೆ ಕಳೆದುಕೊಂಡಿದ್ದಾರೆ. ಆಗ ಈ ಹೋರಾಟಗಾರರು ಎಲ್ಲಿದ್ದರು?’ ಎಂದು ಕೇಳಿದರು.
ಶಿರಸಿ ಶಾಸಕ ಭೀಮಣ್ಣ ನಾಯ್ಕ ಹೇಳಿದ್ದೇನು? ವಿಡಿಯೋ ಇಲ್ಲಿ ನೋಡಿ..