ಸರ್ಕಾರಿ ಅಧಿಕಾರಿ ಹಾಗೂ ಪತ್ರಕರ್ತನ ನಡುವೆ ನಡೆದ ಸಂಘರ್ಷದಿoದ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರು-ಪ್ರತಿದೂರು ಆಲಿಸಿದ ಕಾರವಾರ ಸಿಜೆಎಂ ನ್ಯಾಯಾಲಯ ಪತ್ರಕರ್ತ ಉದಯ ಬರ್ಗಿ ಅವರಿಗೆ 6 ಸಾವಿರ ರೂ ದಂಡ ವಿಧಿಸಿದೆ. ಈ ಆದೇಶ ಪ್ರಶ್ನಿಸಿ ಉದಯ ಬರ್ಗಿ ಮೇಲ್ಮನವಿ ಸಲ್ಲಿಸಿದ್ದು, ಸಿಜೆಎಂ ನ್ಯಾಯಾಲಯದ ಆದೇಶಕ್ಕೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.
2018ರಲ್ಲಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಕಚೇರಿಯ ಭೂ ಮಾಪನಾ ಇಲಾಖೆಯಲ್ಲಿ ವೇಣುಗೋಪಾಲ್ ಎಂಬಾತರು ಡಿಡಿಎಲ್ಆರ್ ಆಗಿ ಕರ್ತವ್ಯದಲ್ಲಿದ್ದರು. ಅವರ ವಿರುದ್ಧ ಸಾಕಷ್ಟು ಆರೋಪಗಳಿದ್ದು, ಈ ಬಗ್ಗೆ ಬಿ ಟಿವಿ ವರದಿ ಪ್ರಸಾರ ಮಾಡಿತ್ತು. ಮುಂದುವರೆದು, ಆ ವೇಳೆ ಕಾರವಾರದಲ್ಲಿ B ಟಿವಿ ಪ್ರತಿನಿಧಿಯಾಗಿದ್ದ ಉದಯ ಬರ್ಗಿ ಅವರನ್ನು ವರದಿಗಾರಿಕೆಗಾಗಿ ಭೂ ಮಾಪನಾ ಇಲಾಖೆಗೆ ಕಳುಹಿಸಿತ್ತು.
B ಟಿವಿ ಕ್ಯಾಮರಾ ನೋಡಿದ ಡಿಡಿಎಲ್ಆರ್ ವೇಣುಗೋಪಾಲ್ ಸಿಡಿಮಿಡಿಗೊಂಡಿದ್ದರು. ಕಚೇರಿಯೊಳಗೆ ವಿಡಿಯೋ ಚಿತ್ರಿಕರಣ ನಡೆಸುತ್ತಿದ್ದ ಉದಯ ಬರ್ಗಿ ಹಾಗೂ ವೇಣುಗೋಪಾಲ್ ನಡುವೆ ವಾಗ್ವಾದ ನಡೆದಿತ್ತು. ಈ ವಿಷಯವಾಗಿ ಎರಡು ಕಡೆಯವರು ಕರ್ತವ್ಯಕ್ಕೆ ಅಡ್ಡಿ, ಹಲ್ಲೆ ಪ್ರಯತ್ನ, ನಿಂದನೆ ಸೇರಿ ವಿವಿಧ ಆರೋಪಗಳನ್ನುಹೋರಿಸಿ ಪೊಲೀಸ್ ದೂರು ನೀಡಿದ್ದರು.
ಪ್ರಕರಣದ ವಾದ ಆಲಿಸಿದ ಸಿಜೆಎಂ ನ್ಯಾಯಾಲಯ ಪತ್ರಕರ್ತ ಉದಯ ಬರ್ಗಿ ಅವರಿಗೆ 6 ಸಾವಿರ ರೂ ದಂಡ ಅಥವಾ 6 ತಿಂಗಳ ಜೈಲು ಶಿಕ್ಷೆ ವಿಧಿಸಿ ಆದೇಶಿಸಿತು. ಆದರೆ, ಈ ಆದೇಶ ಪ್ರಶ್ನಿಸಿ ಉದಯ ಬರ್ಗಿ ತಮ್ಮ ವಕೀಲ ವೀರೇಂದ್ರ ಗಿರಿಯಣ್ಣ ನಾಯಕ ತೊರ್ಕೆ ಮೂಲಕ ಮೇಲ್ಮನವಿ ಸಲ್ಲಿಸಿದರು. ಈ ಮೇಲ್ಮನವಿ ಪುರಸ್ಕರಿಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕೆಲ ನ್ಯಾಯಾಲಯದ ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ಉದಯ ಬರ್ಗಿ ಅವರು ಸದ್ಯ ಪವರ್ ಟಿವಿ ಪ್ರತಿನಿಧಿಯಾಗಿದ್ದಾರೆ.