ಯಲ್ಲಾಪುರ: `ಹಿಂದುತ್ವ ಹಾಗೂ ಹಿಂದುಳಿದ ವರ್ಗದ ಶ್ರೇಯಸ್ಸಿಗಾಗಿ ಶ್ರಮಿಸುತ್ತಿರುವ ಪ ಪಂ ಸದಸ್ಯ ಸೋಮೇಶ್ವರ ನಾಯ್ಕ ವಿರುದ್ಧ ಕುತಂತ್ರ ರಾಜಕಾರಣ ನಡೆದಿದೆ’ ಎಂದು ನಾಮದಾರಿ ಸಂಘ ಹಾಗೂ ಹಿಂದುಳಿದ ಸಮಾಜ ಸೇನೆ ಆರೋಪಿಸಿದೆ.
`ಯುಗಾದಿ ಉತ್ಸವ, ಹಿಂದೂ ಜಾಗರಣಾ ವೇದಿಕೆಯ ಸಂಘಟನೆ, ಜಿಲ್ಲಾ ಗೋಪರಿವಾರಕ್ಕಾಗಿ ಸೋಮೇಶ್ವರ ನಾಯ್ಕ ಸಾಕಷ್ಟು ಶ್ರಮ ಹಾಕಿದ್ದಾರೆ. ರವೀಂದ್ರ ನಗರ ಪ್ರತಿನಿಧಿಸಿ ಪಟ್ಟಣ ಪಂಚಾಯತ ಸದಸ್ಯರಾಗಿರುವ ಅವರು ನಾಮದಾರಿ ಸಂಘದ ಅಧ್ಯಕ್ಷರಾಗಿ ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗುತ್ತಿದ್ದಾರೆ. ಅಂಥವರ ವಿರುದ್ಧ ಅನಗತ್ಯ ಆರೋಪ ಮಾಡುವುದು ಸರಿಯಲ್ಲ’ ಎಂದು ಅವರ ಬೆಂಬಲಿಗರು ಹೇಳಿದ್ದಾರೆ.
`ಯಲ್ಲಾಪುರದ ಶಾಸಕ ಶಿವರಾಮ ಹೆಬ್ಬಾರ್ ಬಿಜೆಪಿಯಿಂದ ಗೆದ್ದು ಇದೀಗ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ಇದನ್ನು ಸೋಮೇಶ್ವರ ನಾಯ್ಕ ಖಂಡಿಸಿದ್ದಾರೆ. ಶಾಸಕರು ತಪ್ಪು ಮಾಡಿದ ಬಗ್ಗೆ ದೂರಿದ ಕಾರಣ ಸೋಮೇಶ್ವರ ನಾಯ್ಕ ಅವರನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಲಾಗುತ್ತಿದ್ದು, ರಾಜಕೀಯ ವಿಷಯಕ್ಕಾಗಿ ಪ ಪಂ ಪ್ರತಿನಿಧಿ ವಿರುದ್ಧ ಈ ಬಗೆಯ ದ್ವೇಷ ಸಾಧಿಸುವುದು ಸಮಂಜಸವಲ್ಲ’ ಎಂದು ರವೀಂದ್ರ ನಗರ ಭಾಗದವರು ಅಭಿಪ್ರಾಯ ವ್ಯಕ್ತಪಡಿಸಿದರು.
`ರಾಜಕಾರಣದಲ್ಲಿ ಟೀಕೆ ಮಾಡುವುದು ಸಹಜ. ಕಾರ್ಯಕರ್ತರಿಗೆ ಆದ ಅನ್ಯಾಯದ ಬಗ್ಗೆ ಹೇಳಿಕೊಳ್ಳುವುದು ನ್ಯಾಯ. ಪ್ರಜಾಪ್ರಭುತ್ವಕ್ಕೆ ಆದ ಅಪಮಾನದ ಬಗ್ಗೆ ಪ್ರಶ್ನಿಸಿದ ಕಾರಣ ವಿಷಬೀಜ ಬಿತ್ತುವ ನಡವಳಿಕೆ ಆರೋಗ್ಯಕರವಲ್ಲ’ ಎಂದು ಹೇಳಿದ್ದಾರೆ. `ನಾವೆಲ್ಲರೂ ಒಂದು ಎಂದು ಬದುಕುತ್ತಿರುವ ಸಮಾಜದಲ್ಲಿ ಒಡಕು ಮೂಡಿಸಿ, ಅಶಾಂತಿ ಮೂಡಿಸುವ ಪ್ರಯತ್ನ ನಡೆದಿದೆ. ಅದರೊಂದಿಗೆ ಹಿಂದುಳಿದ ನಾಮದಾರಿ ಸಮುದಾಯದ ನಾಯಕ ಸೋಮೇಶ್ವರ ನಾಯ್ಕ ವಿರುದ್ಧ ಪದೇ ಪದೇ ರಾಜಕೀಯ ಕಾರಣದಿಂದ ದಬ್ಬಾಳಿಕೆ ನಡೆಸುವುದನ್ನು ಖಂಡಿಸುತ್ತೇವೆ’ ಎಂದು ಸಂಘದ ಪ್ರಮುಖರು ಹೇಳಿದ್ದಾರೆ.
ಈ ಕುರಿತು ತಹಶೀಲ್ದಾರ್ ಕಚೇರಿ ಮೂಲಕ ನಾಮದಾರಿ ಸಂಘ ಹಾಗೂ ಹಿಂದುಳಿದ ಸಮಾಜ ಸೇನೆಯವರು ಮನವಿ ಸಲ್ಲಿಸಿದರು. ಪ್ರತಾಪ್ ಶಿವಯೋಗಿ, ಕಾರ್ತಿಕ್ ನಾಯ್ಕ, ಪ್ರದೀಪ್ ಯಲ್ಲಾಪುರ, ಪ್ರಭು ಚಿಚಕಂಡಿ, ಸುಭಾಷ್ ಶೇಷಗಿರಿ, ಗಜು ನಾಯ್ಕ, ಪ್ರಕಾಶ ಬಸಲೇಬೈಲ್, ಮಹೇಶ್ ದೇಸಾಯಿ, ರವಿ ದೇವಾಡಿಗ, ಸಂತೋಷ್ ನಾಯ್ಕ, ಮಹಾಂತೇಶ್ ಇನ್ನಿತರರು ಇದ್ದರು.