ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಬಳಿಯ ಹಾರುಮೇಸ್ಕೇರಿಯ ಗೀತಾ ಗೌಡ ನಿನ್ನೆ-ಮೊನ್ನೆಯವರೆಗೂ ಪೊಲೀಸ್ ಕಾನ್ಸ್ಟೇಬಲ್ ಆಗಿದ್ದರು. ಆದರೆ, ಇದೀಗ ಅವರು ಪಿಎಸ್ಐ ಆಗಿದ್ದಾರೆ!
ಮುಂಬಡ್ತಿ ಪಡೆದು ಈ ಹುದ್ದೆಗೆ ಬರಬೇಕು ಅಂದರೆ ಸೇವೆಗೆ ಸೇರಿ ಕನಿಷ್ಟ 25 ವರ್ಷ ಕಳೆಯಬೇಕಿತ್ತು. ಆದರೆ, ಶೃದ್ಧೆಯಿಂದ ಪರೀಕ್ಷೆ ಎದುರಿಸಿದ ಅವರು ಸೇವೆಗೆ ಸೇರಿದ 10 ವರ್ಷದಲ್ಲಿ ಈ ಸಾಧನೆ ಮಾಡಿದ್ದಾರೆ. ಸಕಾಲದಲ್ಲಿ ಮುಂಬ0ಡ್ತಿ ದೊರೆತರೂ ಈ ವೇಳೆಗೆ ಅವರು ಹೆಡ್ ಕಾನ್ಸಟೇಬಲ್ ಆಗುತ್ತಿದ್ದರು. ಪರೀಕ್ಷೆ ಎದುರಿಸಿದ ಕಾರಣ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಪಿಎಸ್ಐ ಆಗಿ ಆಯ್ಕೆಯಾಗಿದ್ದಾರೆ.
ಪೊಲೀಸ್ ಪೇದೆಯಾಗಿ ಆಯ್ಕೆಯಾದ ತಕ್ಷಣ ಮೈಸೂರಿನಲ್ಲಿ ತರಬೇತಿ ಪಡೆದಿದ್ದ ಗೀತಾ ಗೌಡ ನಂತರ ಬೆಂಗಳೂರು ಸೇರಿದರು. ಅಲ್ಲಿ ಬಾಂಬ್ ದಾಳಿ ರಕ್ಷಣಾ ತಂಡದಲ್ಲಿ ಕಾರ್ಯ ನಿರ್ವಹಿಸಿದರು. ನಂತರ ಮೆಟ್ರೋ ಸೇರಿ ವಿವಿಧ ಕಡೆ ಸೇವೆ ಸಲ್ಲಿಸಿದರು. ನಡುವೆ ಸೂಕ್ಷ್ಮ ಸ್ಥಾವರಗಳ ಭದ್ರತೆಗೂ ಅವರನ್ನು ನಿಯೋಜಿಸಲಾಗಿತ್ತು. ಅದಾದ ನಂತರ ಹುಬ್ಬಳ್ಳಿ ವಿಮಾನ ನಿಲ್ದಾಣದ ಭದ್ರತೆಗೆ ಅವರನ್ನು ಕಳುಹಿಸಲಾಗಿದ್ದು, ಪ್ರಸ್ತುತ ಧಾರವಾಡ ಕಾರಾಗೃಹದಲ್ಲಿ ಕರ್ತವ್ಯದಲ್ಲಿದ್ದಾರೆ.
`ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಕೌಶಲ್ಯ ಅಳವಡಿಸಿಕೊಂಡರೆ ಸಾಧನೆ ಸಾಧ್ಯ’ ಎಂಬುದು ಗೀತಾ ಗೌಡ ಅವರ ಮಾತು. `ವಿಮಾನ ನಿಲ್ದಾಣದಲ್ಲಿ ಸೇವೆಯಲ್ಲಿದ್ದ ಕಾರಣ ಭಾಷಾ ಸಂವಹನ ಪರೀಕ್ಷೆ ಎದುರಿಸಲು ಸಹಾಯವಾಯಿತು’ ಎಂದವರು ಅನಿಸಿಕೆ ಹಂಚಿಕೊoಡರು. `ಪರೀಕ್ಷೆಯಲ್ಲಿ ಪ್ರಬಂಧಕ್ಕೆ 50 ಅಂಕಗಳಿದ್ದು, ಪ್ರಜಾಪ್ರಭುತ್ವ ಕಾನೂನು ಮಹತ್ವದ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಕಾನೂನು ಮಹತ್ವದ ಬಗ್ಗೆ ಇದ್ದ ತಿಳುವಳಿಕೆ ಪಿಎಸ್ಐ ಆಗಲು ನೆರವಾಯಿತು’ ಎಂದವರು ಹೇಳಿದರು.
ಅತ್ಯಂತ ಹಿಂದೂಳಿದ ಹಾಲಕ್ಕಿ ಸಮುದಾಯದವರಲ್ಲಿ ಮಹಿಳಾ ಪೊಲೀಸರ ಸಂಖ್ಯೆ ವಿರಳ. ಅದರಲ್ಲಿಯೂ ಪಿಎಸ್ಐ ಆಗಿ ಆಯ್ಕೆ ಆದವರಲ್ಲಿ ಗೀತಾ ಗೌಡ ಮೊದಲಿಗರು. ಹೀಗಾಗಿ ಹಾಲಕ್ಕಿ ಸಮುದಾಯದಲ್ಲಿ ಸಡಗರ ಮನೆ ಮಾಡಿದೆ.