ಕಾರವಾರ: ಲಕ್ಷಾಂತರ ರೂ ಬೆಲೆ ಬಾಳುವ ಚಿನ್ನ ಕದಿಯುವುದಕ್ಕಾಗಿ ದೇವಾಲಯಕ್ಕೆ ನುಗ್ಗಿದ ಕಳ್ಳರು ಅಲ್ಲಿಂದ ನಕಲಿ ಬಂಗಾರ ( ರೋಲ್ ಗೋಲ್ಡ) ಕದ್ದು ಪರಾರಿಯಾಗಿದ್ದಾರೆ.
ಮಾಜಾಳಿ ದೇವತಿ ದೇವಾಲಯದಲ್ಲಿ ಭಾನುವಾರ ರಾತ್ರಿ ಕಳ್ಳತನ ನಡೆದಿದೆ. ದೇವಾಲಯದ ಕಿಟಕಿ ಒಡೆದು ಕಳ್ಳರು ಒಳಗೆ ಪ್ರವೇಶಿಸಿದ್ದು, ದೇವಿ ಮೈಮೇಲೆ ಇದ್ದ ಎರಡು ಸರವನ್ನು ದೋಚಿದ್ದಾರೆ. ಜೊತೆಗೆ ದೇವಿಗೆ ಅಳವಡಿಸಿದ್ದ ಬೆಳ್ಳಿ ಕಣ್ಣುಗಳನ್ನು ಕಿತ್ತು ಪರಾರಿಯಾಗಿದ್ದಾರೆ. ದೇವಿ ಮೈಮೇಲೆ 1500 ರೂ ಬೆಲೆಯ ರೋಲ್ ಗೋಲ್ಡ್ ಬಂಗಾರವನ್ನು ಹಾಕಲಾಗಿತ್ತು. ಬೆಳ್ಳಿಯ ಕಣ್ಣುಗಳು 500ರೂ ಬೆಲೆಯದ್ದಾಗಿದ್ದವು. ಸೋಮವಾರ ಬೆಳಗ್ಗೆ ಜಗದೀಶ ಗುರವ್ ಅವರು ಪೂಜೆಗೆ ತೆರಳಿದಾಗ ಕಳ್ಳತನ ನಡೆದಿರುವುದು ಅರಿವಿಗೆ ಬಂದಿದೆ.
ಜಗದೀಶ್ ಅವರು ಕುಟುಂಬದವರ ಜೊತೆ ಚರ್ಚಿಸಿ ಈ ಬಗ್ಗೆ ಚಿತ್ತಾಕುಲ ಪೊಲೀಸರಿಗೆ ದೂರು ನೀಡಿದ್ದಾರೆ. ಕಳ್ಳರ ಚಲನವಲನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಅದನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಕಾರವಾರದಲ್ಲಿ ದೇವಾಲಯಗಳ ಸರಣಿ ಕಳ್ಳತನ ನಡೆಯುತ್ತಿದ್ದು, ವಾರದ ಹಿಂದೆ ಸಹ ಹಲವು ದೇವಾಲಯಗಳಲ್ಲಿ ಕಳ್ಳರು ಕೈ ಚಳಕ ಪ್ರದರ್ಶಿಸಿದ್ದರು.