ಉತ್ತರ ಕನ್ನಡ ಜಿಲ್ಲೆಯ ಅಡಿಕೆ ಬೆಳೆಗಾರರಿಗೆ ಅನ್ಯಾಯ ಮಾಡಲು ಮುಂದಾಗಿದ್ದ ಕ್ಷೇಮ ಜನರಲ್ ಇನ್ಸುರೆನ್ಸ ಕಂಪನಿಗೆ ಕೇಂದ್ರ ಸರ್ಕಾರ ಚಾಟಿ ಬೀಸಿದೆ. ಹವಾಮಾನ ಆಧಾರಿತ ವಿಮಾ ಪರಿಹಾರದಲ್ಲಿ ಆದ ಅನ್ಯಾಯದ ಬಗ್ಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಕೃಷಿ ಸಚಿವ ಶಿವರಾಜ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದಿದ್ದು, ನಿನ್ನೆಯ ಗುರುವಾರದಿಂದ 7 ದಿನದ ಒಳಗೆ ರೈತರ ಖಾತೆಗೆ ವಿಮಾ ಪರಿಹಾರ ಜಮಾ ಮಾಡಬೇಕು ಎಂದು ಕೇಂದ್ರ ಸರ್ಕಾರ ಆದೇಶಿಸಿದೆ.
ವಿಮಾ ಪರಿಹಾರಕ್ಕೆ ನಿರಂತರ ಪ್ರಯತ್ನ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಜನವರಿ 18ರಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ವಿಮಾ ಪರಿಹಾರದ ಬಗ್ಗೆ ಪದೇ ಪದೇ ಪತ್ರ ಬರೆದಿದ್ದಾರೆ. ಜೊತೆಗೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿ ಮಾಡಿ ಅನ್ಯಾಯದ ಬಗ್ಗೆ ವಿವರಿಸಿದ್ದಾರೆ. ವಿವಿಧ ಅಧಿಕಾರಿಗಳನ್ನು ಈ ವಿಷಯವಾಗಿ ಪ್ರಶ್ನಿಸಿದ್ದಾರೆ. 2023ನೇ ಸಾಲಿನ ವಿಮಾ ಪರಿಹಾರ ಈವರೆಗೂ ಸಿಗದ ಬಗ್ಗೆ ಅವರು ದೇಶಮಟ್ಟದಲ್ಲಿ ಅಧಿಕಾರಿಗಳ ಗಮನಸೆಳೆದಿದ್ದು, ಅದರ ಪರಿಣಾಮವಾಗಿ ಗುರುವಾರ ಆದೇಶವೊಂದು ಹೊರಬಿದ್ದಿದೆ. ಕೇಂದ್ರ ಸರ್ಕಾರದ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ ಕ್ಷೇಮ ಇನ್ಸೂರೆನ್ಸ ಕಂಪನಿ ಹಾಗೂ ರಾಜ್ಯ ಸರ್ಕಾರದ ತೋಟಗಾರಿಕಾ ಇಲಾಖೆಗೆ ವಾರದೊಳಗೆ ವಿಮೆ ಪರಿಹಾರ ಪಾವತಿಗೆ ಸೂಚಿಸಿದೆ.
ಅದರ ಪ್ರಕಾರ ರಾಜ್ಯ ಸರ್ಕಾರ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿರುವ ಮಳೆ ಮಾಪನಗಳನ್ನು ಸರಿಯಾಗಿರಿಸಿಕೊಳ್ಳಬೇಕು. ವಿಮಾ ಕಂಪನಿಗೆ ಅಗತ್ಯಕ್ಕೆ ಅನುಗುಣವಾಗಿ ಅಲ್ಲಿನ ಮಾಹಿತಿ ಕೊಡಬೇಕು. ಇದರಿಂದ ರೈತರಿಗೆ ಸಮಯಕ್ಕೆ ಸರಿಯಾಗಿ ವಿಮಾ ಪರಿಹಾರ ಸಿಗಲಿದೆ ಎಂಬ ಅಂಶವನ್ನು ಉಲ್ಲೇಖಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ವಿಮಾ ಯೋಜನೆಯನ್ನು ನೋಡಿಕೊಳ್ಳುತ್ತಿರುವ ಕ್ಷೇಮ ಜನರಲ್ ಇನ್ಸೂರೆನ್ಸ್ ಕಂಪನಿ ಸೂಕ್ತ ಸಮಯದಲ್ಲಿ ಯಾವುದೇ ತಕರಾರು ಸಲ್ಲಿಸಿಲ್ಲ. ಆದರೆ, ಇದೀಗ ವಿಮೆ ಪರಿಹಾರ ನೀಡಲು ವಿಳಂಬ ಮಾಡುತ್ತಿರುವುದಕ್ಕೆ ಕಾನೂನು ಮಾನ್ಯತೆ ಇಲ್ಲ ಎಂದು ಸರ್ಕಾರ ಹೇಳಿದೆ.
ಈ ಎಲ್ಲಾ ಹಿನ್ನಲೆ ವಿಮಾ ಕಂಪನಿ ಇದೀಗ ಲೆಕ್ಕಾಚಾರ ಶುರು ಮಾಡಿದ್ದು, ಅಲ್ಲಿಯೂ ಉಳಿತಾಯದ ಆಟವಾಡುವ ಸಿದ್ಧತೆ ನಡೆಸಿದೆ. ಸರ್ಕಾರದ ಆದೇಶದ ನಂತರವೂ ವಿಮಾ ಕಂಪನಿ ಕಾಸು ಉಳಿತಾಯಕ್ಕಾಗಿ ಕಸರತ್ತು ನಡೆಸಿ, ಇನ್ನೂ ಆರು ದಿನಗಳ ಒಳಗೆ ವಿಮಾ ಪರಿಹಾರ ಜಮಾ ಮಾಡದೇ ಇದ್ದರೆ `ಕೇಂದ್ರ ಸರ್ಕಾರದ ಈ ಆದೇಶಕ್ಕೆ ಬೆಲೆಯೇ ಇಲ್ಲ’ ಎಂದು ಜಾಹೀರಾಗುತ್ತದೆ. ಜೊತೆಗೆ ಸಂಸದ ಹಾಗೂ ಸಚಿವರ ಪ್ರಯತ್ನಕ್ಕೂ ಕಿಮ್ಮಿತ್ತಿಲ್ಲ ಎಂಬ ಪರಿಸ್ಥಿತಿ ಉದ್ಬವವಾಗುತ್ತದೆ.