ಅತಿವೃಷ್ಠಿಯಿಂದ ಅಡಿಕೆ ಬೆಳೆಗಾರರುತತ್ತರಿಸಿದರೂ ಈವರೆಗೂ ವಿಮಾ ಪರಿಹಾರ ಜಮಾ ಆಗಿಲ್ಲ. ಈ ಹಿನ್ನಲೆ ಜಿಲ್ಲೆಯ ಹಲವು ಕಡೆ ಪ್ರತಿಭಟನೆಗಳು ನಡೆದಿವೆ. ಅದರ ಬೆನ್ನಲ್ಲೆ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಶಿವರಾಮ ಹೆಬ್ಬಾರ್ `ಇನ್ನೂ 15 ದಿನದ ಒಳಗೆ ರೈತರ ಖಾತೆಗೆ ಬೆಳೆ ವಿಮೆ ಪರಿಹಾರ ಜಮಾ ಆಗಲಿದೆ’ ಎಂದು ಹೇಳಿದ್ದಾರೆ.
`ಮಳೆ ಮಾಪನದಿಂದ ಆಗಿರುವ ದೋಷದಿಂದ ವಿಮೆ ಪರಿಹಾರ ಬರುವಲ್ಲಿ ತಡವಾಗಿದೆ. ವಿಮಾ ಕಂಪನಿ ಸಹ ಹಣ ನೀಡದೇ ಇರುವುದಕ್ಕೆ ಕಾರಣ ಹುಡುಕುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದು, ಸಚಿವರ ಜೊತೆ ಎರಡು ಸಲ ಸಭೆ ನಡೆಸಲಾಗಿದೆ’ ಎಂದು ಶಿವರಾಮ ಹೆಬ್ಬಾರ್ ವಿವರಿಸಿದ್ದಾರೆ.
`ಬೆಳೆ ವಿಮೆ ಕೊಡಬೇಕಾಗಿದ್ದು ಕೇಂದ್ರ ಸರ್ಕಾರ. ಬೆಳೆ ವಿಮೆ ಮೇಲೆ ನಿಗಾವಿರಸಬೇಕಾಗಿದ್ದು ರಾಜ್ಯ ಸರ್ಕಾರ. ಸಕಾಲದಲ್ಲಿ ಬೆಳೆ ವಿಮೆ ಪರಿಹಾರ ಪಾವತಿಸಬೇಕಾಗಿದ್ದು ಎಲ್ಲಾ ಸರ್ಕಾರದ ಹೊಣೆ’ ಎಂದವರು ಅಭಿಪ್ರಾಯಪಟ್ಟಿದ್ದಾರೆ.
`ಬೆಳೆ ವಿಮೆ ವಿತರಣೆಯಲ್ಲಿ ಆಗಿರುವ ತಾಂತ್ರಿಕ ದೋಷ ಪರಿಹಾರಕ್ಕೆ ಸೂಚಿಸಲಾಗಿದೆ. ವಿಮಾ ಅಧಿಕಾರಿಗಳಿಗೆ ಸಹ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಕೆಲವೇ ದಿನಗಳಲ್ಲಿ ನಿಶ್ಚಿತವಾಗಿ ರೈತರ ಖಾತೆಗೆ ಬೆಳೆ ವಿಮೆ ಪರಿಹಾರ ಮೊತ್ತ ಜಮಾ ಆಗಲಿದೆ’ ಎಂದವರು ಹೇಳಿದ್ದಾರೆ.
`53 ಪಂಚಾಯತ ವ್ಯಾಪ್ತಿಯಲ್ಲಿನ ಬೆಳೆ ವಿಮಾ ಪರಿಹಾರಕ್ಕೆ ಸಂಬAಧಿಸಿ ಮೊತ್ತ ನಿಗದಿಯಾಗಿದೆ. ಉಳಿದ ಕಡೆ ಮಾಪನ ಕಾರ್ಯ ನಡೆಯುತ್ತಿದ್ದು, ಎಲ್ಲಾ ದೋಷ ಬಗೆಹರಿಸಿ ವಿಮಾ ಪರಿಹಾರ ಜಮಾ ಮಾಡಿಸಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಗೆ ಬರಬೇಕಾದ ಪೂರ್ತಿ ಪ್ರಮಾಣದ ಪರಿಹಾರ ಹಣ ಬಂದೇ ಬರುತ್ತದೆ’ ಎಂದವರು ಭರವಸೆ ನೀಡಿದ್ದಾರೆ.