ರಾಮನಗುಳಿ ಬಳಿ ಅನಾಥವಾಗಿದ್ದ ಕಾರಿನಲ್ಲಿ ಕೋಟಿ ರೂ ಹಣ ಸಿಕ್ಕಿದ ಪ್ರಕರಣ ಇನ್ನೊಂದು ತಿರುವು ಪಡೆದಿದೆ.
ಜನವರಿ 28ರಂದು ಹುಬ್ಬಳ್ಳಿ ಅಂಕೋಲಾ ಹೆದ್ದಾರಿ ಅಂಚಿನ ರಾಮನಗುಳಿ ಬಳಿ ಐಷಾರಾಮಿ ಕಾರೊಂದು ಅನಾಥವಾಗಿ ಬಿದ್ದಿತ್ತು. ಕಾರಿನ ಗ್ಲಾಸುಗಳು ಒಡೆದಿದ್ದರಿಂದ ಅನೇಕರು ಕಾರು ಅಪಘಾತವಾಗಿದೆ ಎಂದು ಭಾವಿಸಿದ್ದರು. ಪೊಲೀಸರು ಬಂದು ಪರಿಶೀಲಿಸಿದ್ದರು. ಆಗ, ಕಾರಿನ ಒಳಗೆ 1.14 ಲಕ್ಷ ರೂ ಹಣ ಪತ್ತೆಯಾಗಿದ್ದು, ಆ ಹಣದ ಜೊತೆ ಕಾರನ್ನು ಪೊಲೀಸ್ ಸಿಬ್ಬಂದಿ ವಶಕ್ಕೆ ಪಡೆದಿದ್ದರು.
ಇನ್ನಷ್ಟು ವಿಚಾರಣೆ ನಡೆಸಿದಾಗ ಆ ಕಾರಿನ ನೋಂದಣಿ ಸಂಖ್ಯೆ ನಕಲಿ ಎಂದು ಗೊತ್ತಾಯಿತು. ಕಾರಿನೊಳಗೆ ಇನ್ನು ಹಲವು ಬಗೆಯ ನೋಂದಣಿ ಸಂಖ್ಯೆಗಳಿದ್ದವು. ಈ ನಡುವೆ ಮಂಗಳೂರಿನ ವ್ಯಕ್ತಿಯೊಬ್ಬ `ಆ ಕಾರು ತನ್ನದು’ ಎಂದು ಹೇಳಿಕೊಂಡಿದ್ದ. `ಅರಬೈಲಿನಲ್ಲಿ ತನ್ನ ಮೇಲೆ ದಾಳಿ ನಡೆಸಿ ಕಾರು ದೋಚಿದರು’ ಎಂದು ಆತ ಫೋನ್ ಮಾಡಿದ್ದ. ಆದರೆ, ಪೊಲೀಸರು ಸಾಕಷ್ಟು ಪ್ರಯತ್ನ ನಡೆಸಿದರೂ ಈವರೆಗೂ ಫೋನ್ ಮಾಡಿದ ವ್ಯಕ್ತಿ ಸಿಕ್ಕಿರಲಿಲ್ಲ.
ಇದೀಗ ಆ ಕಾರು ಹಾಗೂ ಹಣ ಮಂಗಳೂರಿನ ವಿವೇಕ ಪವಾರ್ ಎಂಬಾತರಿಗೆ ಸೇರಿದ್ದು ಎಂದು ಗೊತ್ತಾಗಿದೆ. ಮಾಹಾರಾಷ್ಟç ಮೂಲದ ವಿವೇಕ್ ಪವರ್ ಮಂಗಳೂರಿನಲ್ಲಿ ಚಿನ್ನದ ವ್ಯಾಪಾರಿ. ಅವರ ಕಾರನ್ನು ರಾಜೇಂದ್ರ ಪವಾರ್ ಎಂಬಾತರು ಬಳಸುತ್ತಿದ್ದರು. ಆದರೆ, ಇಷ್ಟು ದಿನದವರೆಗೂ ಆ ಕಾರು ಹಾಗೂ ಹಣ ಪಡೆಯಲು ರಾಜೇಂದ್ರ ಪವಾರ್ ಅಂಕೋಲಾ ಪೊಲೀಸ್ ಠಾಣೆಗೆ ಬಂದಿರಲಿಲ್ಲ. ಫೆ 17ರಂದು ಠಾಣೆಗೆ ಹಾಜರಾದ ಅವರು `ಅನಾರೋಗ್ಯದ ಕಾರಣ ಬರಲು ಸಾಧ್ಯವಾಗಿಲ್ಲ’ ಎಂದು ಹೇಳಿಕೆ ನೀಡಿದ್ದಾರೆ.
ಇನ್ನೂ ವಿವೇಕ ಪವಾರ್ ಸಹ ಚಿನ್ನದ ವ್ಯಾಪಾರಿ. ಅವರ ಜೊತೆ ಮಂಗಳೂರಿನ ರಾಜೇಂದ್ರ ಪವಾರ್, ಅಬ್ದುಲ್ ಅಂದುನಿ, ಮಹಮದ್ ಖಾನಿ ಎಂಬಾತರು ಅಂಕೋಲಾ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ. `ಜನವರಿ 26ರಂದು ರಾಜೇಂದ್ರ ಪವಾರ್ ಅವರ ವ್ಯವಹಾರ ನೋಡಿಕೊಳ್ಳುವ ಆಕಾಶ ಅವರು ಬೆಳಗಾವಿಗೆ ಹೋಗಿದ್ದರು. ಅಲ್ಲಿ ಸಚೀನ್ ಜಾದವ್ ಅವರಿಗೆ ಬಂಗಾರ ನೀಡಿ ಹಣ ಪಡೆದಿದ್ದರು. ಅವರ ಜೊತೆ ಇನ್ನೊಬ್ಬ ಚಾಲಕ ಅಬ್ದುಲ್ ಸಮದ್ ಸಹ ಇದ್ದು, ಸುರಕ್ಷತೆ ದೃಷ್ಠಿಯಿಂದ ವಾಹನದ ನಂ ಪ್ಲೇಟ್ ಬದಲಿಸಿದ್ದರು’ ಎಂದು ವಿವೇಕ್ ಪವಾರ್ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.
ಇದರೊಂದಿಗೆ `ಆಕಾಶ ಮೂಲಕ ತುಷಾರ್ ಎಂಬಾತರನ್ನು ಭೇಟಿ ಮಾಡಿ 2.95 ಕೋಟಿ ರೂ ಹಣ ಪಡೆದು ಮರಳುತ್ತಿದ್ದರು. ಪಡೆದ ಹಣದ ಪೈಕಿ 1.80 ಕೋಟಿ ರೂ ಕಾರಿನ ಸೀಟಿನ ಕೆಳಗೆ ಹಾಗೂ ಉಳಿದ ಹಣವನ್ನು ಕಾರಿನ ಹಿಂದಿನ ಸೀಟಿನ ಲಾಕರಿನಲ್ಲಿರಿಸಲಾಗಿತ್ತು. ಮರಳಿ ಮಂಗಳೂರಿಗೆ ಬರುವಾಗ ಯಲ್ಲಾಪುರದ ಬಳಿ ಬಿಳಿ ಬಣ್ಣದ ಕಾರಿನವರು ಹಿಂಬಾಲಿಸಿಕೊoಡು ಬಂದಿದ್ದಲ್ಲದೇ ಐದು ಜನ ಕಾರನ್ನು ಅಡ್ಡಗಟ್ಟಿ ಹಣ ದೋಚಿದರು’ ಎಂಬ ಬಗ್ಗೆ ವಿವೇಕ್ ಪವಾರ್ ವಿವರಿಸಿದ್ದಾರೆ.
`ಡಕಾಯಿತರು ಚಾಕು ತೋರಿಸಿ ಪರ್ಸ ಹಾಗೂ ಮೊಬೈಲ್ ಕಿತ್ತುಕೊಂಡಿದ್ದರು. ಅನಾರೋಗ್ಯ ಹಾಗೂ ಡಕಾಯಿತರ ಭಯದಿಂದ ನಾವು ದೂರು ಕೊಟ್ಟಿರಲಿಲ್ಲ. ನಮ್ಮ ಹಣವನ್ನು ನಮಗೆ ಮರಳಿಸುವುದರ ಜೊತೆ ಡಕಾಯಿತರನ್ನು ಹುಡುಕಿಕೊಡಿ’ ಎಂದು ಪೊಲೀಸರಿಗೆ ವಿವೇಕ್ ಪವಾರ್ ದೂರು ನೀಡಿದ್ದಾರೆ.