ಪುಟ್ಟ ಮಗು, ವೃದ್ಧ ಅತ್ತೆ-ಮಾವ-ಅತ್ತಿಗೆ ಜೊತೆ ಚಿತ್ರದುರ್ಗದ ರೇಣುಕಾಸ್ವಾಮಿ ಪತ್ನಿ ಸಹನಾ ಉತ್ತರ ಕನ್ನಡ ಜಿಲ್ಲೆಗೆ ಬಂದಿದ್ದಾರೆ. ಶ್ರೀಕ್ಷೇತ್ರ ಗೋಕರ್ಣದಲ್ಲಿ ಸಮುದ್ರ ಸ್ನಾನ ಮಾಡಿ ಅವರು ಭಾವುಕರಾದರು.
`ಮಗನಿಗೆ ಮೋಕ್ಷ ಸಿಗಬೇಕು. ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗಬೇಕು. ತನ್ನ ಸೊಸೆಗೆ ಸಹನಾಗೆ ನೌಕರಿ ಸಿಗಬೇಕು’ ಎಂದು ರೇಣುಕಾಸ್ವಾಮಿ ಅವರ ತಂದೆ ಕಾಶಿನಾಥ ಶಿವನಗೌಡರ್ ಪ್ರಾರ್ಥಿಸಿದರು. `ಕಾನೂನಿನ ಬಗ್ಗೆ ನಂಬಿಕೆಯಿದೆ. ಆದರೆ, ಈಚೆಗಿನ ಬೆಳವಣಿಗೆಗಳು ಅರ್ಥವೇ ಆಗುತ್ತಿಲ್ಲ’ ಎಂದು ಬೇಸರಿಸಿಕೊಂಡರು.
ಬುಧವಾರ ಬೆಳಗ್ಗೆ ಗೋಕರ್ಣದ ವೀರಶೈವಮಠಕ್ಕೆ ಆಗಮಿಸಿದ ಅವರು ಅಲ್ಲಿನ ಬಸಯ್ಯ ಅವರನ್ನು ಭೇಟಿ ಮಾಡಿದರು. ಯಾತ್ರಾ ನಿವಾಸ ನಿರ್ವಾಹಕ ಗಣಪತಿ ನಾಯಕ ಅವರ ಮೂಲಕ ವಿವಿಧ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. `ನಾವು ಯಾರಲ್ಲಿಯೂ ಸಹಾಯ ಯಾಚಿಸಿಲ್ಲ. ನಮಗೆ ಈವರೆಗೂ ಯಾರು ಸಹಾಯವನ್ನು ಮಾಡಿಲ್ಲ. ಹಣಕಾಸಿನ ಸೌಲಭ್ಯವೂ ಸಿಕ್ಕಿಲ್ಲ. ಹೀಗಾಗಿ ಸೊಸೆಗೆ ಸರ್ಕಾರಿ ನೌಕರಿ ಕೊಡಬೇಕು ಎಂದು ಅರ್ಜಿ ಸಲ್ಲಿಸಿದ್ದು, ಇದಕ್ಕೆ ಅವಕಾಶವಿಲ್ಲ ಎಂದು ಹಿಂಬರಹ ನೀಡಲಾಗಿದೆ’ ಎಂದು ಅಳಲು ತೋಡಿಕೊಂಡರು.
`ರೇಣುಕಾಸ್ವಾಮಿ ಹತ್ಯೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ನೌಕರಿ ವಿಷಯವಾಗಿ ಸಲ್ಲಿಸಿದ ಅರ್ಜಿಯನ್ನು ಮರುಪರಿಶೀಲನೆಗೆ ಒಳಪಡಿಸಿ ಉದ್ಯೋಗ ದೊರಕಿಸಿಕೊಡಬೇಕು’ ಎಂದು ಅವರು ಮನವಿ ಮಾಡಿದರು. `ಸರ್ಕಾರದ ಮೇಲೆ ನಮಗೆ ನಂಬಿಕೆಯಿದೆ. ಸರ್ಕಾರ ಅದನ್ನು ಉಳಿಸಿಕೊಳ್ಳಬೇಕು’ ಎಂದರು. `ಮಗನ ಸಾವಿನ ವರ್ಷದ ಒಳಗೆ ಗೋಕರ್ಣಕ್ಕೆ ಹೋಗುವಂತೆ ಹಿರಿಯರು ಹೇಳಿದ್ದರು. ಅದರ ಪ್ರಕಾರ ಇಲ್ಲಿಗೆ ಬಂದಿದ್ದೇವೆ’ ಎನ್ನುತ್ತ ಕಣ್ಣೀರಾದರು.
ನಟ ದರ್ಶನ್ ಅವರ ಆಪ್ತ ಗೆಳತಿ ಪವಿತ್ರಾ ಗೌಡ ಅವರಿಗೆ ರೇಣುಕಾಸ್ವಾಮಿ ಕೆಟ್ಟದಾಗಿ ಮೆಸೆಜ್ ಮಾಡಿದ್ದರು. ಹೀಗಾಗಿ ದರ್ಶನ್ ಅವರ ತಂಡದವರು ರೇಣುಕಾಸ್ವಾಮಿಯನ್ನು ಶೆಡ್ಡಿನಲ್ಲಿ ಕೂಡಿಹಾಕಿ ಕೊಲೆ ಮಾಡಿದ್ದರು. 2024ರ ಜೂನ್ 9ರಂದು ಬೆಂಗಳೂರಿನ ಸುಮೇನಳ್ಳಿ ಸೇತುವೆ ಬಳಿ ರೇಣುಕಾಸ್ವಾಮಿ ಶವ ಪತ್ತೆಯಾಗಿದ್ದು, ಈ ಪ್ರಕರಣದಲ್ಲಿ ನಟ ದರ್ಶನ್ ಜೈಲುವಾಸ ಅನುಭವಿಸಿದ್ದರು. ಸದ್ಯ ದರ್ಶನ್ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ.
ಇನ್ನೂ, ರೇಣುಕಾಸ್ವಾಮಿ ಕೊಲೆಯಾದಾಗ ಸಹನಾ 5 ತಿಂಗಳ ಗರ್ಭಿಣಿಯಾಗಿದ್ದರು. ನಂತರ ಅವರಿಗೆ ಜನಿಸಿದ ಮಗುವಿಗೆ ಶಶಿಧರ್ ಎಂದು ನಾಮಕರಣ ಮಾಡಲಾಗಿದ್ದು, ಆ ಮಗುವಿನ ಜೊತೆ ಮಾವ ಕಾಶಿನಾಥ ಶಿವನಗೌಡರ್, ಅತ್ತೆ ರತ್ನಪ್ರಭಾ ಹಾಗೂ ಅತ್ತಿಗೆ ಸುಚಿತ್ರಾ ಜೊತೆ ಗೋಕರ್ಣಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು.
ಗೋಕರ್ಣಕ್ಕೆ ಬಂದ ರೇಣುಕಾಸ್ವಾಮಿ ಕುಟುಂಬದವರು ಹೇಳಿದ್ದೇನು? ವಿಡಿಯೋ ಇಲ್ಲಿ ನೋಡಿ..