ಹೊನ್ನಾವರ ಮಂಕಿ ಬಳಿಯ ಬುಡಬುಡಹಕ್ಕಲುವಿನ ಯಕ್ಷ ಚೌಡೇಶ್ವರಿ ದೇಗುಲದ ಅರ್ಚಕ ಮಾದೇವ ಅಂಬಿಗ ಅವರು ಬಳಕೂರಿನ ಕೇಶವ ನಾಯ್ಕ ಹಾಗೂ ಅವರ ಕುಟುಂಬದವರಿಗೆ ಜೀವ ಬೆದರಿಕೆ ಒಡ್ಡಿದ್ದಾರೆ. ಸಾರ್ವಜನಿಕ ಹಿತಾಸಕ್ತಿ ಕೆಲಸ ಮಾಡಲು ಪ್ರಯತ್ನಿಸಿದ ಕಾರಣ ತಮಗೆ ಬೆದರಿಕೆ ಬಂದಿರುವ ಬಗ್ಗೆ ಕೇಶವ ನಾಯ್ಕ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಫೆ 20ರಂದು ಹೊನ್ನಾವರ ಬಳಕೂರು ಗ್ರಾಮದ ಬುಡಬುಡಹಕ್ಕಲು ಯಕ್ಷಚೌಡೇಶ್ವರಿ ದೇವಾಲಯದ ಬಳಿ ವಿದ್ಯುತ್ ಕಂಬಗಳನ್ನು ನೆಡಲು ನಿರ್ಧರಿಸಲಾಗಿತ್ತು. ಇದಕ್ಕಾಗಿ ಹೆಸ್ಕಾಂ ಗುತ್ತಿಗೆದಾರ ಪ್ರವೀಣ ನಾಯ್ಕ ಹಾಗೂ ಕೆಲಸದವರ ಬಳಿ ಊರಿನವರು ಚರ್ಚೆ ನಡೆಸುತ್ತಿದ್ದರು. ನೀಲಗೋಡಿನ ಈಶ್ವರ ಗೌಡ ಅವರು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕೆಲಸ ಮಾಡುವಂತೆ ಮನವಿ ಮಾಡಿದ್ದರು.
ಆಗ, ಅಲ್ಲಿಗೆ ಬಂದ ಯಕ್ಷ ಚೌಡೇಶ್ವರಿ ದೇಗುಲದ ಅರ್ಚಕ ಮಾದೇವ ಅಂಬಿಗ `ನನ್ನ ತೋಟಕ್ಕೆ ಹೇಗೆ ಬರುತ್ತೀಯಾ?’ ಎಂದು ಕೇಶವ ನಾಯ್ಕರ ಬಳಿ ಪ್ರಶ್ನಿಸಿದ್ದರು. ಈ ವಿಷಯ ದೊಡ್ಡದಾಗಿ ಮಾತಿಗೆ ಮಾತು ಬೆಳೆಯಿತು. `ನನ್ನ ಬಳಿಯೂ ಜನರಿದ್ದಾರೆ. ನಿನ್ನ ಹೆಂಡತಿ-ಮಕ್ಕಳನ್ನು ಮುಗಿಸುವೆ’ ಎಂದು ಅರ್ಚಕ ಮಾದೇವ ಅಂಬಿಗ ಬೊಬ್ಬೆ ಹೊಡೆದಿದ್ದರು.
ಈ ವಿಷಯವಾಗಿ ಅದೇ ದಿನ ಕೇಶವ ನಾಯ್ಕ ಮಂಕಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಪೊಲೀಸರು ರಾಜಿ ನಡೆಸಿ ಹಿಂಬರಹವನ್ನು ನೀಡಿದ್ದರು. ಆದರೆ, ಇದಕ್ಕೆ ಒಪ್ಪದ ಕೇಶವ ನಾಯ್ಕ ನ್ಯಾಯಾಲಯದ ಮೊರೆ ಹೋಗಿ ಇದೀಗ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ. ಆರೋಪಿ ಅರ್ಚಕನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.