ಯಲ್ಲಾಪುರ: ಶಾಸಕ ಶಿವರಾಮ ಹೆಬ್ಬಾರ್ ಅವರ ಪರಮ ಆಪ್ತರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ಡಾ ರವಿ ಭಟ್ಟ ಬರಗದ್ದೆ ಸರ್ಕಾರಿ ಅನುದಾನದಲ್ಲಿ ತಮ್ಮ ಊರಾದ ಬಿಸಗೋಡು ರಸ್ತೆ ರಿಪೇರಿ ಮಾಡಿಸುವಲ್ಲಿ ವಿಫಲರಾಗಿದ್ದು, ಇದೀಗ ರಸ್ತೆ ದುರಸ್ಥಿಗೆ ಹಣ ಹೊಂದಿಸಲು ಜೋಳಿಗೆ ಹಿಡಿದು ಮನೆ ಮನೆ ತಿರುಗಾಟ ಮಾಡುವ ನಿರ್ಣಯಕ್ಕೆ ಒಪ್ಪಿಗೆ ಸೂಚಿಸಿದ್ದಾರೆ!
ಬಿಸಗೋಡು ರಸ್ತೆ ಸಂಪೂರ್ಣ ಹೊಂಡಗಳಿoದ ಕೂಡಿದ್ದು, ಸಾಕಷ್ಟು ಪ್ರಯತ್ನ ನಡೆಸಿದರೂ ಈ ರಸ್ತೆ ಅಭಿವೃದ್ಧಿಗೆ ಅನುದಾನ ಸಿಕ್ಕಿಲ್ಲ. ಆ ಭಾಗದಲ್ಲಿ ಘಟಾನುಘಟಿ ನಾಯಕರಿದ್ದರೂ ರಸ್ತೆ ಅಭಿವೃದ್ಧಿಗೆ ಅಗತ್ಯವಿರುವ ಹಣ ತರಲು ಸಾಧ್ಯವಾಗಿಲ್ಲ. ಚುನಾವಣಾ ಅವಧಿಯಲ್ಲಿ ಜನ ಹಾಗೂ ಜನಪ್ರತಿನಿಧಿ ನಡುವೆ ಬಿರುಕು ಮೂಡಿದ್ದು, ಜನರನ್ನು ಜನಪ್ರತಿನಿಧಿಗಳೊಂದಿಗೆ ಸರಿದೂಗಿಸಿಕೊಂಡು ಹೋಗುವ ಕೆಲಸ ಆ ಭಾಗದ ನಾಯಕರಿಂದ ನಡೆದಿಲ್ಲ. ಇದರ ಪರಿಣಾಮವಾಗಿ ತಾಲೂಕಿನ ಎಲ್ಲಾ ಪ್ರದೇಶಗಳು ಉದ್ದಾರವಾದರೂ ಶಿವರಾಮ ಹೆಬ್ಬಾರ್ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಡಾ ರವಿ ಭಟ್ಟ ಬರಗದ್ದೆ ಅವರ ಊರಾದ ಬಿಸಗೋಡು ಅಭಿವೃದ್ಧಿ ಹೊಂದಿಲ್ಲ. ಹೀಗಾಗಿ `ನಮ್ಮಲ್ಲಿನ ನಾಯಕರು ಶಾಸಕರನ್ನು ಹೊಗಳಿ ಅವರ ಜೊತೆ ಫೋಟೋ ಹೊಡೆಸಿಕೊಳ್ಳಲು ಮಾತ್ರ ಸೀಮಿತ’ ಎಂಬ ಅರ್ಥದಲ್ಲಿ ಇದೀಗ ಆ ಭಾಗದ ಜನ ಅಭಿಪ್ರಾಯ ಹಂಚಿಕೊoಡಿದ್ದಾರೆ.
`ರಸ್ತೆ ಹೊಂಡ ಮುಚ್ಚಿಕೊಡಿ’ ಎಂದು ಕಳೆದ ಮೂರು ವರ್ಷಗಳಿಂದ ಬಿಸಗೋಡಿನ ಜನ ಒತ್ತಾಯಿಸುತ್ತಲೇ ಬಂದಿದ್ದಾರೆ. ಕಳೆದ ವರ್ಷ ರಸ್ತೆ ಹೊಂಡದ ಬಗ್ಗೆ ಊರಿನವರು ಪ್ರಶ್ನಿಸಿದಾಗ `ಈ ರಸ್ತೆ ಮೇಲ್ದರ್ಜಗೆ ಏರಲಿದೆ. 1 ಕೋಟಿ ರೂ ಮಂಜೂರಿಯಾಗಿದೆ’ ಎಂದು ಶಾಸಕರ ಬೆಂಬಲಿಗರು ಹೇಳಿಕೊಂಡಿದ್ದರು. ಆದರೆ, ಈವರೆಗೂ ರಸ್ತೆ ಮೇಲ್ದರ್ಜೆಗೂ ಏರಿಲ್ಲ. 1 ಕೋಟಿ ರೂ ಬಗ್ಗೆಯೂ ಮಾತಿಲ್ಲ. ಜನಸ್ಪಂದನಾ ಸಭೆಯಲ್ಲಿ ಈ ರಸ್ತೆ ಅಭಿವೃದ್ಧಿಗೆ ಬಗ್ಗೆ ಗ್ರಾ ಪಂ ಅಧ್ಯಕ್ಷೆ ಮೀನಾಕ್ಷಿ ಭಟ್ಟ ದೂರು ನೀಡಿದರೂ ಅದಕ್ಕೆ ಯಾರೂ ಉತ್ತರಿಸಿಲ್ಲ.
2008ರಲ್ಲಿ ಸಹ ರಸ್ತೆ ಹಾಳಾದಾಗ ಜನ ಪ್ರತಿಭಟನೆ ನಡೆಸಿದ್ದರು. ಆಗ ಹೊಂಡಗಳಿಗೆ ತೇಪೆ ಹಚ್ಚುವ ಕೆಲಸ ನಡೆದಿತ್ತು. ಕಳೆದ ಆರು ವರ್ಷಗಳ ಹಿಂದೆಯೂ ಒಮ್ಮೆ ಹೊಂಡಗಳಿಗೆ ಮಣ್ಣು ಹಾಕಲಾಗಿತ್ತು. ಆ ಮಣ್ಣುಗಳೆಲ್ಲವೂ ಕೊಚ್ಚಿ ಹೋಗಿದ್ದರಿಂದ ಇದೀಗ ಮತ್ತೆ ಹೊಂಡಗಳು ಬಿದ್ದಿದ್ದು, ವಾಹನ ಸವಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನಲೆ ಮಂಗಳವಾರ ರಾತ್ರಿ ಊರಿನಲ್ಲಿ ಸಭೆ ಸೇರಿದ ಪ್ರಮುಖರು ರಸ್ತೆ ಅಭಿವೃದ್ಧಿಗೆ ಹಣ ಹೊಂದಿಸಲು ಜೋಳಿಗೆ ಹಿಡಿದು ಮನೆ ಮನೆ ಸಂಚಾರ ಮಾಡುವ ಬಗ್ಗೆ ನಿರ್ಣಯಿಸಿದರು. ಈ ಸಭೆಯಲ್ಲಿ ಹಾಜರಿದ್ದ ಡಾ ರವಿ ಭಟ್ಟ ಬರಗದ್ದೆ ಈ ವೇಳೆ ತೀವೃ ಮುಜುಗರ ಅನುಭವಿಸಿದರು. ತಮ್ಮ ಭಾಗದಲ್ಲಿ ಓಡಾಡಿ ಹಣ ಹೊಂದಿಸಿಕೊಡುವ ಬಗ್ಗೆ ಅವರು ಒಪ್ಪಿಗೆ ಸೂಚಿಸಿದ್ದು, `ಈ ವಿಷಯದಲ್ಲಿ ಯಾರೂ ರಾಜಕೀಯ ಮಾತನಾಡಬಾರದು’ ಎಂದು ಕೇಳಿಕೊಂಡರು!
`ಒಳ್ಳೆಯ ಕೆಲಸ ನಡೆದಾಗ ಎಲ್ಲರೂ ತಾವೇ ಮಾಡಿಸಿದ್ದು. ತಮ್ಮ ಸಾಹೇಬರು ಮಾಡಿಸಿದ್ದು ಎಂದು ಹೇಳಿಕೊಳ್ಳುತ್ತಾರೆ. ರಸ್ತೆ ಹೊಂಡಕ್ಕೆ ಅನುದಾನ ತರಲು ಸಾಧ್ಯವಾಗದ ಬಗ್ಗೆ ಪ್ರಶ್ನಿಸಿದಾಗ ಉತ್ತರಿಸುವವರಿಲ್ಲ’ ಎಂದು ಅನೇಕರು ಹೇಳಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಡಾ ರವಿ ಭಟ್ಟ ಬರಗದ್ದೆ `ದೆಹಳ್ಳಿ ಹಾಗೂ ಆನಗೋಡು ಗ್ರಾ ಪಂ-ಸೊಸೈಟಿ ಸೇರಿ ಜನರಿಂದ ದೇಣಿಗೆ ಪಡೆದು ತಾತ್ಕಾಲಿಕ ರಸ್ತೆ ರಿಪೇರಿಗೆ ನಿರ್ಣಯಿಸಲಾಗಿದೆ. ಈ ರಸ್ತೆ ಅಭಿವೃದ್ಧಿ ಮಾಡಲು ಶಾಸಕರು ಗುತ್ತಿಗೆ ಪಡೆದಿಲ್ಲ. ಜನರ ಮತದಿಂದ ಆಯ್ಕೆಯಾದ ಸಂಸದ ಹಾಗೂ ಇನ್ನಿತರರ ಜವಾಬ್ದಾರಿ ಸಹ ಇಲ್ಲಿದೆ’ ಎಂದು ಪ್ರತಿಕ್ರಿಯಿಸಿದರು. `ಕಳೆದ ಅವಧಿಯಲ್ಲಿ ಆನಗೋಡು-ಬಿಸಗೋಡು ಭಾಗಕ್ಕೆ 46 ಕೋಟಿ ರೂ ಅನುದಾನ ತರಲಾಗಿದ್ದು, ಶಾಸಕ ಶಿವರಾಮ ಹೆಬ್ಬಾರ್ ಪ್ರಯತ್ನದಿಂದ ಸಾವಗದ್ದೆ ರಸ್ತೆ ಆಗಿದೆ. ಬಿಸಗೋಡಿನಲ್ಲಿ 2ಕಿಮೀ ರಸ್ತೆ ಮಾತ್ರ ಹದಗೆಟ್ಟಿದ್ದು, ಅದರ ನಿರ್ಮಾಣ ಪ್ರಯತ್ನ ನಡೆದಿದೆ. ಎಲ್ಲವನ್ನು ಶಾಸಕರೇ ಮಾಡುವುದಾದರೆ ಉಳಿದ ಜನಪ್ರತಿನಿಧಿಗಳ ಜವಾಬ್ದಾರಿ ಏನು?’ ಎಂದು ಪ್ರಶ್ನಿಸಿದರು. `ಆಗದೇ ಇದ್ದ ಕೆಲಸಕ್ಕೆ ಶಾಸಕರು ಮಾತ್ರ ಹೊಣೆಯಲ್ಲ’ ಎಂದು ಡಾ ರವಿ ಭಟ್ಟ ಬರಗದ್ದೆ ಸಮರ್ಥಿಸಿಕೊಂಡರು.