`ಅರಣ್ಯ ಅತಿಕ್ರಮಣದಾರರ ಸಮಸ್ಯೆ ಪರಿಹಾರಕ್ಕೆ ಹೊಸ ಅರಣ್ಯ ನೀತಿ ಜಾರಿಗೆ ಬರಬೇಕು’ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ.
ಫೆ 15ರಂದು ಹೊನ್ನಾವರದ ಮೂಡಗಣಪತಿದ ದೇವಸ್ಥಾನದ ಸಂಭಾಗಣದಲ್ಲಿ ರಾಜ್ಯ ಮಟ್ಟದ ಅರಣ್ಯವಾಸಿಗಳಿಗೆ ಕಾನೂನು ಜಾಗೃತ ಜಾಥಾಗೆ ಚಾಲನೆ ನೀಡಿ ಮಾತನಾಡಿದ ಅವರು `ದಿನದಿಂದ ದಿನಕ್ಕೆ ಅರಣ್ಯವಾಸಿಗಳ ಸಮಸ್ಯೆಗಳು ಉಲ್ಬಣವಾಗುತ್ತಿದೆ. ಅರಣ್ಯವಾಸಿಗಳಿಗೆ ಮೂಲಭೂತ ಸೌಕರ್ಯಗಳಾದ ಮನೆ ಸಂಖ್ಯೆ, ನೀರು, ರಸ್ತೆ ಅಧಿಕೃತವಾಗಿಲ್ಲ. ಸರ್ಕಾರ ಸಹ ಸರ್ವೋಚ್ಛ ನ್ಯಾಯಾಲಯದಲ್ಲಿ ಅನಧಿಕೃತ ಒತ್ತುದ್ದಾರರನ್ನು ಒಕ್ಕಲೆಬ್ಬಿಸುವ ಬಗ್ಗೆ ಪ್ರಮಾಣ ಪತ್ರ ಸಲ್ಲಿಸುತ್ತಿರುವುದು ಧ್ವಂದ ನೀತಿಗೆ ಕಾರಣ’ ಎಂದವರು ಹೇಳಿದ್ದಾರೆ.
`ದೇಶದಲ್ಲಿ 250 ಮಿಲಿಯನ ಜನಸಂಖ್ಯೆ ಅರಣ್ಯ ಭೂಮಿಯ ಮೇಲೆ ಅವಲಂಬಿತರಾಗಿದ್ದಾರೆ. ಆದರೆ, ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ದೇಶಾದ್ಯಂತ ಅರಣ್ಯ ಭೂಮಿ ಹಕ್ಕು ದೊರಕಿರುವುದು ಕೇವಲ ಶೇ 16ರಷ್ಟು ಅರಣ್ಯವಾಸಿಗಳಿಗೆ ಮಾತ್ರ. ಅರಣ್ಯವಾಸಿಗಳು ಸರ್ಕಾರದ ನೀತಿಯಿಂದ ನಿರಾಶ್ರಿತರಾಗುವ ಭೀತಿಯನ್ನು ಎದುರಿಸುತ್ತಿದ್ದಾರೆ’ ಎಂದವರು ಆತಂಕವ್ಯಕ್ತಪಡಿಸಿದರು.
`ಅರಣ್ಯ ಹಕ್ಕು ಕಾಯಿದೆ ಜಾರಿಗೆ ಬಂದು 15 ವರ್ಷವಾದರೂ ಅನುಷ್ಠಾನದಲ್ಲಿ ವೈಪಲ್ಯ ಕಂಡಿದೆ. ಇಚ್ಚಾಶಕ್ತಿ ಕೊರತೆ ಎದ್ದು ಕಾಣುತ್ತಿದೆ. ಕಾನೂನಿಗೆ ವ್ಯತಿರಿಕ್ತವಾಗಿ ಅರ್ಜಿಗಳು ತಿರಸ್ಕಾರವಾಗಿದೆ. ಅರಣ್ಯವಾಸಿಗಳಿಗೆ ಮೂಲಭೂತವಾಗಿ ಕಾನೂನಿನ ಅರಿವು ಮೂಡಿಸುವಲ್ಲಿ ವಿಫಲವಾಗಿದ್ದೇವೆ. ಈ ಹಿನ್ನಲೆಯಲ್ಲಿ ಹೋರಾಟಗಾರರ ವೇದಿಕೆಯು ರಾಜ್ಯದ 16 ಜಿಲ್ಲೆಯಗಳಲ್ಲಿ 500ಕ್ಕೂ ಮಿಕ್ಕಿ ಅರಣ್ಯವಾಸಿಗಳ ವಾಸ್ತವ್ಯ ಸ್ಥಳದಲ್ಲಿ ಕಾನೂನು ಜಾಗೃತ ಕಾರ್ಯಕ್ರಮ ಆಯೋಜಿಸಿದೆ’ ಎಂದರು.
ಶಾAತಿ ಗೌಡ ಕಡ್ನೀರು ದೀಪ ಬೆಳಗಿಸಿ ಉದ್ಘಾಟಿಸಿದರು. ಪ್ರಮುಖರಾದ ಸುರೇಶ ಮೇಸ್ತಾ, ರಾಘವೇಂದ್ರ ಕವಂಚೂರು, ರಾಮ ಮರಾಠಿ, ಗಿರೀಶ ಚಿತ್ತಾರ, ವಿನೋದ ನಾಯ್ಕ, ದಾವುದ್ ಸಾಬ, ಸುರೇಶ ತಂಬೋಳ್ಳಿ, ಜಾನ್ ಒಡ್ತಾ, ರಫೀಕ್, ಧರ್ಮ ನಾಯ್ಕ, ಸುರೇಶ ನಗರಬಸ್ತಿಕೇರಿ ಇತರರು ಇದ್ದರು.