ಹಳಿಯಾಳದ ಗಾಂಧಿಕೇರಿಯಲ್ಲಿ ಮನೆ ಕಟ್ಟುವ ವಿಚಾರವಾಗಿ ಅಪ್ಪ-ಮಗನ ನಡುವೆ ವೈಮನಸ್ಸು ಉಂಟಾಗಿದೆ. ಇದೇ ವಿಷಯವಾಗಿ ಜಗಳವಾಗಿದ್ದು, ಸುರೇಶ ತಳವಾರ ಎಂಬಾತರು ತಮ್ಮ ತಂದೆ ಪರಶುರಾಮ ತಳವಾರ್ ಅವರಿಗೆ ಚಾಕು ಚುಚ್ಚಿ ಕೊಲೆಗೆ ಪ್ರಯತ್ನಿಸಿದ್ದಾರೆ!
81 ವರ್ಷದ ಪರಶುರಾಮ ತಳವಾರ ಅವರು ಸರ್ವೇ ನಂ 1414ರ ಮಾಲಕರಾಗಿದ್ದಾರೆ. ಈ ಭೂಮಿಯಲ್ಲಿ ಮನೆ ಕಟ್ಟುವುದಾಗಿ ಅವರ ಪುತ್ರ ಸುರೇಶ ತಳವಾರ್ ಹೇಳಿದ್ದು, ಅದಕ್ಕೆ ಪರಶುರಾಮ ತಳವಾರ್ ಒಪ್ಪಿಗೆ ಸೂಚಿಸಿಲ್ಲ. 2024ರ ಅಕ್ಟೋಬರಿನಿಂದ ಅಪ್ಪ-ಮಕ್ಕಳ ನಡುವೆ ಇದೇ ವಿಷಯವಾಗಿ ವೈಮನಸ್ಸು ಉಂಟಾಗಿದೆ. ಪದೇ ಪದೇ ಜಗಳವೂ ನಡೆದಿದೆ.
ಮಾರ್ಚ 26ರಂದು ಸುರೇಶ ತಳವಾರ್ ಮತ್ತೆ ಮನೆ ಕಟ್ಟುವ ವಿಚಾರವಾಗಿ ಕುಟುಂಬದವರ ಜೊತೆ ಜಗಳ ಮಾಡಿದ್ದಾರೆ. ರಾತ್ರಿ 8.30ಕ್ಕೆ ಜಗಳ ಜೋರಾದಾಗ ಪರಶುರಾಮ ತಳವಾರ್ ಸಮಾಧಾನ ಮಾಡಿದ್ದಾರೆ. `ಹಿರಿಯರ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸೋಣ’ ಎಂದು ಪರಶುರಾಮ ತಳವಾರ್ ಹೇಳಿದ್ದಾರೆ. ಆಗ, ಏಕಾಏಕಿ ಸಿಟ್ಟಾದ ಸುರೇಶ ತಳವಾರ್ ತಂದೆಗೆ ಕೆಟ್ಟದಾಗಿ ಬೈದಿದ್ದಾರೆ. `ನೀನು ಎಂಥ ಅಪ್ಪ?’ ಎಂದು ಪ್ರಶ್ನಿಸಿದ್ದಾರೆ.
ಜಗಳ ಬಿಡಿಸಲು ಬಂದ ತಾಯಿ ಸುಗಂಧ ಅವರಿಗೂ ನಿಂದಿಸಿದ್ದಾರೆ. `ತಂದೆ-ತಾಯಿಗೆ ಆ ರೀತಿ ಹೇಳಬಾರದು’ ಎಂದು ಬುದ್ದಿ ಹೇಳಿದಾಗ ಸುರೇಶ ತಳವಾರ್ ಇನ್ನಷ್ಟು ಸಿಟ್ಟಾಗಿದ್ದಾರೆ. `ನೀನು ಹೋದರೆ ಎಲ್ಲಾ ಸರಿಯಾಗುತ್ತದೆ’ ಎಂದು ಹೇಳಿದ ಸುರೇಶ ತಳವಾರ್ ಮನೆಯಲ್ಲಿದ್ದ ಚಾಕು ತಂದು ತಂದೆಗೆ ಚುಚ್ಚುವುದಕ್ಕಾಗಿ ದಾವಿಸಿದ್ದಾರೆ. ಆ ವೇಳೆ ಪರಶುರಾಮರ ಇನ್ನೊಬ್ಬ ಮಗ ಬಸಪ್ಪ ಆಗಮಿಸಿ ಚಾಕು ಚುಚ್ಚುವುದನ್ನು ತಡೆದಿದ್ದಾರೆ.
ಅದಾಗಿಯೂ, ಬಸಪ್ಪರನ್ನು ಕೈಯಿಂದ ದೂಡಿದ ಸುರೇಶ ತಳವಾರ್ ಹೊಟ್ಟೆಗೆ ಚಾಕು ಚುಚ್ಚುವ ಪ್ರಯತ್ನ ಮಾಡಿದ್ದಾರೆ. ಆ ವೇಳೆ ಪರಶುರಾಮ ತಳವಾರ್ ಅವರು ತಪ್ಪಿಸಿಕೊಂಡಿದ್ದರಿoದ ಅವರ ಬಲ ಕೈಗೆ ಚಾಕು ತಾಗಿದೆ. ರಕ್ತ ನೋಡಿದ ನಂತರ ಸುರೇಶ ತಳವಾರ್ ಅಲ್ಲಿಂದ ಪರಾರಿಯಾಗಿದ್ದು, ಮಗನಿಂದ ರಕ್ಷಣೆ ಕೋರಿ ಪರಶುರಾಮ ತಳವಾರ್ ಅವರು ಪೊಲೀಸರ ಮೊರೆ ಹೋಗಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಹಳಿಯಾಳ ಪೊಲೀಸರು ತನಿಖೆ ಶುರು ಮಾಡಿದ್ದಾರೆ.